Advertisement

ಬಲಿಗಾಗಿ ಬಾಯ್ತೆರೆದ ರಾಷ್ಟ್ರೀಯ ಹೆದ್ದಾರಿ

09:31 PM Jun 24, 2019 | Team Udayavani |

ದೇವನಹಳ್ಳಿ: ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಂಡಿಗಳಿಂದ ತುಂಬಿದ್ದು, ಪ್ರಯಾಣಿಕರ ಬಲಿಗಾಗಿ ಬಾಯ್ತೆರೆದಿವೆ. ಆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗುಂಡಿಗಳ ನಿರ್ಮಾಣದಿಂದ ಅಪಘಾತ: ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಕಳೆದರೂ, ರಸ್ತೆ ಅಗಲೀಕರಣ ದುರಸ್ತಿ ಕಾರ್ಯವಾಗದಿರುವುದರಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ಅಪಘಾತಗಳಿಗೆ ಎಡೆಮಾಡಿಕೊಡುತ್ತಿವೆ. ಬ್ಯಾಡರಹಳ್ಳಿ-ಸೋಲೂರು ಗೇಟ್‌ ಸಮೀಪದ ತಿರುವಿನಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಆದರೆ ಗುಂಡಿಗಳು ನಿರ್ಮಾಣವಾಗಿರುವುದರಿಂದ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿವೆ. ಇತ್ತಿಚೆಗಷ್ಟೇ ವಿಶ್ವನಾಥಪುರ ಬಳಿ ಆಟೋ ಬಸ್‌ ಮುಖಾಮುಖೀ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ.

ಹೆಚ್ಚು ವಾಹನ ಸಂಚಾರ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ದಿನೆ ದಿನೇ ಹೆಚ್ಚಾಗುತ್ತಿದೆ.ದಾಬಾಸ್‌ಪೇಟೆ-ದೊಡ್ಡಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ, ಸೂಲಿಬೆಲೆ ಮೂಲಕ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿದೆ. ಭಾರೀ ವಾಹನಗಳ ಚಾಲಕರು ಗುಂಡಿಗಳನ್ನು ತಪ್ಪಿಸಲು ಬೇಕಾಬಿಟ್ಟಿಯಾಗಿ ಚಾಲನೆ ಮಾಡುವುದರಿಂದ ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವಂತಾಗಿದೆ. ಜನರು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಜಿಲ್ಲಾಡಳಿತ ಕಚೇರಿಗೆ ಬರುವುದು ಸಾಮಾನ್ಯ.

ಇಂತಹದರಲ್ಲಿ ಸ್ವಲ್ಪ ಯಾಮಾರಿದರೂ ಸಾವೇ ಗತಿ ಎಂದು ಸ್ಥಳೀಯರ ಅಸಮಾಧಾನವಾಗಿದೆ. ಪೂರ್ವಕ್ಕೆ ದೇವನಹಳ್ಳಿ, ವಿಜಯಪುರ, ಕೋಲಾರ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿದರೆ ದಕ್ಷಿಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ನಗರ, ಉತ್ತರಕ್ಕೆ ಬ್ಯಾಡರಹಳ್ಳಿ, ಮಾಯಸಂದ್ರ, ಕಾರಹಳ್ಳಿ ಮಾರ್ಗವಾಗಿ ನಂದಿಬೆಟ್ಟರಸ್ತೆಗೆ ಸಂಪರ್ಕ ಕಲ್ಪಿಸಿದರೆ, ಪಶ್ಚಿಮಕ್ಕೆ ವಿಶ್ವನಾಥಪುರ, ಚಪ್ಪರದಕಲ್ಲು, ಜಿಲ್ಲಾಡಳಿತ ಭವನ, ದೊಡ್ಡಬಳ್ಳಾಪುರ, ದಾಬಸ್‌ಪೇಟೆ, ತುಮಕೂರು ಮಾರ್ಗವಾಗಿ ಹೋಗುತ್ತದೆ.

ರಸ್ತೆ ನಿಯಮ ಪಾಲನೆಯಿಲ್ಲ: ದಿನನಿತ್ಯ ಇದೇ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಅಕ್ಕಪಕ್ಕದ ಗ್ರಾಮಗಳ ಗೇಟ್‌ ಬಳಿ ಹಂಪ್ಸ್‌ ಅಳವಡಿಸಿಲ್ಲ. ವೇಗಮಿತಿ ಅಳವಡಿಸಿದರೂ ಚಾಲಕರು ಪಾಲನೆ ಮಾಡುವುದಿಲ್ಲ. ಜತೆಗೆ ವೇಗ ಮಿತಿ ಕಡಿತಗೊಳಿಸಲು ಸರಿಯಾದ ಮಾರ್ಗಸೂಚಿಯೇ ಇಲ್ಲ. ರಸ್ತೆ ಕಾಮಗಾರಿ ಅಪೂರ್ಣದಿಂದಾಗಿ ಅಲ್ಲಲ್ಲಿ ಇಕ್ಕಟ್ಟಾದ ರಸ್ತೆ ಮತ್ತು ಡಬಲ್‌ ರಸ್ತೆಗಳಿಂದಾಗಿ ವಾಹನ ಚಾಲಕರಿಗೆ ಹೆಚ್ಚಿನ ಶ್ರಮ ಬೀಳುತ್ತದೆ. ಹೀಗಿರುವುದರಿಂದ ಲಘು ಅಪಘಾತಗಳು ಸಂಭವಿಸುತ್ತಲೇ ಇವೆ. ಸುಗಮ ಸಂಚಾರಕ್ಕೆ ಆದಷ್ಟು ಬೇಗ ರಸ್ತೆ ಕಾಮಗಾರಿ ಸಂಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

Advertisement

ಕಾಮಗಾರಿ ಅಪೂರ್ಣಗೊಂಡಿದ್ದು, ಅಪಘಾತಗಳು ಸಂಭವಿಸುತ್ತಿವೆ. ಆದರೂ ಅಧಿಕಾರಿಗಳು ಕುಂಭಕರ್ಣನ ನಿದ್ದೆಯಿಂದ ಎದ್ದಿಲ್ಲ. ಹಲವು ಬಾರಿ ಪ್ರಾಧಿಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನೂಕುಲ ಮಾಡಿಕೊಡಬೇಕು.
-ಬಿಜವಾರ ನಾಗರಾಜ್‌, ಬಹುಜನ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ

ಹೆದ್ದಾರಿ ಪ್ರಾಧಿಕಾರ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸ್ಥಗಿತಗೊಂಡಿರುವ ಕಾಮಗಾರಿಗೆ ವೇಗ ನೀಡಿ, ಗುಂಡಿಗಳನ್ನು ಮುಚ್ಚಿ, ಸೂಚನಾಫ‌ಲಕಗಳನ್ನು ಅಳವಡಿಸಬೇಕು.
-ನಾಗೇಶ್‌, ವಾಹನ ಸವಾರ

ಹೆದ್ದಾರಿ ಗುಂಡಿಗಳಿಂದಾಗಿ ವಿಶ್ವನಾಥ ಪುರ ಪೊಲೀಸ ಠಾಣೆಯಲ್ಲಿ 10 ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 4 ಜನರು ಮೃತಪಟ್ಟಿದ್ದಾರೆ. 6 ಗಾಯಾಳುಗಾಳಿದ್ದಾರೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಿ, ಅಪಘಾತಗಳಿಗೆ ಕಡಿವಾಣ ಹಾಕಬೇಕು.
-ಮಂಜುನಾಥ್‌, ಠಾಣೆ ಎಸ್‌ಐ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next