Advertisement

ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಿಎಂ ಅಸ್ತು

06:00 AM Oct 02, 2018 | |

ಬೆಂಗಳೂರು:ರಾಜ್ಯದಲ್ಲಿ 36 ಸಾವಿರ ಕೋಟಿ ರೂ. ವೆಚ್ಚದಲ್ಲಿ 50 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ 7756 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ 3463 ಕಿ.ಮೀ ಉದ್ದದ ರಸ್ತೆಗಳನ್ನು 4 ಪಥದಿಂದ 6 ಪಥಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಯೋಜನೆ ಜಾರಿಗೆ ಅಗತ್ಯವಿರುವ ಅರಣ್ಯ, ಕಂದಾಯ ಹಾಗೂ ಇಂಧನ ಇಲಾಖೆಯ ಅನುಮತಿ ಪಡೆಯಲು ಸೂಚಿಸಲಾಗಿದೆ. ಅರಣ್ಯ ಕಾಯ್ದೆಯ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗುತ್ತಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿ 15 ದಿನಗಳಿಗೊಮ್ಮೆ ಅಧಿಕಾರಿಗಳ ಜೊತೆ ಮಾತನಾಡಿ, ಯೋಜನೆ ವೇಗ ಹೆಚ್ಚಿಸಲು ಮುಂದಾಗಿದ್ದಾರೆ.

ಬೆಂಗಳೂರು, ಚಿತ್ರದುರ್ಗ, ಧಾರವಾಡ, ಮಂಗಳೂರು, ಕಲಬುರಗಿ, ಹಾಸನ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಣಕಾಸು ನೆರವು ಒದಗಿಸಲಿದ್ದು, ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿ ಕೊಡಲಿದೆ. ಭೂಸ್ವಾಧೀನಕ್ಕೆ ಸುಮಾರು 8 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದರು.

ಈ ತಿಂಗಳಲ್ಲಿ ಕಾಮಗಾರಿ ಆರಂಭ
ಬೆಂಗಳೂರು ಮೈಸೂರು ದಶಪಥ ಯೋಜನೆಯನ್ನು ಈ ತಿಂಗಳಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಯಾವುದಕ್ಕೂ ತಡೆ ನೀಡಿಲ್ಲ. ಸುಮಾರು 7 ಸಾವಿರ ಕೋಟಿ ರೂ.  ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 52.7 ಕಿಲೋ ಮೀಟರ್‌ ರಸ್ತೆಗೆ 3890 ಕೋಟಿ ರೂಪಾಯಿ, ಎರಡನೇ ಹಂತದಲ್ಲಿ 61.1 ಕಿಲೋ ಮೀಟರ್‌ ರಸ್ತೆಗೆ 3300 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.

Advertisement

ಈ ಯೋಜನೆಗೆ ಸುಮಾರು 1500 ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಶೇಕಡಾ 80 ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ. ಕೇಂದ್ರದ ಕೆಲವು ಇಲಾಖೆಗಳಿಂದ ಅನುಮತಿ ದೊರೆಯುವುದು ವಿಳಂಬವಾಗಿದೆ. ಆದಷ್ಟು ಬೇಗ ಕೇಂದ್ರದಿಂದ ಅನುಮತಿ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ರೈತರ ಸಾಲ ಮನ್ನಾ ಯೋಜನೆಗೆ ಅರ್ಹ ರೈತರು ಅರ್ಜಿ ಸಲ್ಲಿಸಲು ಒಂದೇ ದಿನ ಅವಕಾಶ ಕಲ್ಪಿಸಲಾಗಿದೆ ಎನ್ನುವುದನ್ನು ತಳ್ಳಿ ಹಾಕಿದ ಅವರು, ಆ ರೀತಿಯ ಯಾವುದೇ ಸೂಚನೆ ನೀಡಿಲ್ಲ. ರೈತರಿಗೆ ಯಾವುದೇ ಡೆಡ್‌ಲೈನ್‌ ನೀಡಿಲ್ಲ.ಅಕ್ಟೋಬರ್‌ 10 ರೊಳಗೆ ಎಲ್ಲ ಮಾಹಿತಿ ಸಂಗ್ರಹಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಳ್ಳು ಮಾಹಿತಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ಇನ್ನು ಬ್ಯಾಂಕ್‌ನವರು ಯಾವುದೇ ರೈತರಿಗೆ ನೊಟೀಸ್‌ ನೀಡಿಲ್ಲ. 30-11-2018 ಕ್ಕೆ ಕೊನೆಗೊಳ್ಳುವ ಎನ್‌ಪಿಎ ಆಗಿರುವ ರೈತರಿಗೆ ತಿರುವಳಿ ಪತ್ರ ನೀಡುತ್ತಿದ್ದು, ಸರ್ಕಾರ ಮತ್ತು ಬ್ಯಾಂಕ್‌ನವರ ಮಧ್ಯ ಆಗಿರುವ ಮಾತುಕತೆಯ ಹಿನ್ನೆಲೆಯಲ್ಲಿ ಈ ರೀತಿಯ ತಿರುವಳಿ ಪತ್ರ ನೀಡುತ್ತಿದ್ದಾರೆ. ಅದರಿಂದ ಯಾವುದೇ ರೈತರು ಭಯ ಪಡುವ ಅಗತ್ಯವಿಲ್ಲ. ಸಾಲ ಮನ್ನಾ ಫ‌ಲಾನುಭವಿಗಳಿಗೆ ಬ್ಯಾಂಕ್‌ನವರು ನೊಟೀಸ್‌ ನೀಡಿದರೆ, ಅಂತಹ ಅಧಿಕಾರಿಯನ್ನು ಬಂಧಿಸುವಂತೆ ಆದೇಶಿಲಾಗಿದೆ. ಈಗಾಗಲೇ ವಿಜಯಪುರದಲ್ಲಿ ಕೆನರಾ ಬ್ಯಾಂಕ್‌ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಎಂಜಿನಿಯರ್‌ ವರ್ಗಾವಣೆ ನಿಯಮ ಮೀರಿಲ್ಲ
ಲೋಕೋಪಯೋಗಿ ಇಲಾಖೆಯಲ್ಲಿ ನಿಯಮ ಮೀರಿ ಎಂಜನೀಯರ್‌ಗಳ ವರ್ಗಾವಣೆ ಮಾಡಿಲ್ಲ.  4567 ಎಂಜಿನಿಯರ್‌ಗಳಲ್ಲಿ 526 ಮಂದಿಯನ್ನು ವರ್ಗಾಯಿಸಲಾಗಿದೆ. ಅದರಲ್ಲಿ 13 ವಿವಿಧ ಹಂತದ ಅಧಿಕಾರಿಗಳಿದ್ದಾರೆ. ಒಟ್ಟು ಹುದ್ದೆಗಳಲ್ಲಿ ಶೇ. 4 ರಷ್ಟು ಮಾತ್ರ ವರ್ಗಾವಣೆ ಮಾಡಲಾಗಿದೆ.
– ಎಚ್‌.ಡಿ.ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next