Advertisement

ಉಡುಪಿ-ಚಿಕ್ಕಮಗಳೂರು: ಸಂಸತ್ತಿಗೆ ಕೋಟ ಶ್ರೀನಿವಾಸ ಪೂಜಾರಿ ದಿಟ್ಟ ಓಟ

12:18 AM Jun 05, 2024 | Team Udayavani |

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಜಯ ಸಾಧಿಸುವ ಮೂಲಕ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಮಾತ್ರವಲ್ಲದೇ ಈ ಗೆಲುವಿನ ಮೂಲಕ ವಿಧಾನ ಪರಿಷತ್‌ ವಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಸಂಸತ್‌ ಸದಸ್ಯರಾಗಿ ಭಡ್ತಿ ಹೊಂದಿದಂತಾಗಿದೆ.

Advertisement

ಉಡುಪಿಯ ಸೈಂಟ್‌ ಸಿಸಿಲೀಸ್‌ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. ಆರಂಭದ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 19 ಸುತ್ತುಗಳಲ್ಲಿಯೂ ಮುಂದಿದ್ದರು. ಪೂಜಾರಿಯವರು 7,32,234 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಕೆ. ಜಯಪ್ರಕಾಶ್‌ ಹೆಗ್ಡೆ 4,73,059 ಮತಗಳನ್ನು ಪಡೆದರು. ಶ್ರೀನಿವಾಸ ಪೂಜಾರಿ 2,59,175 ಮತಗಳ ಅಂತರದಲ್ಲಿ ಜಯ ಸಾಧಿಸಿದರು. 11,269 ಮತಗಳು ನೋಟದ ಪಾಲಾಗಿದ್ದರೆ, ಉಳಿದ 8 ಪಕ್ಷೇತರ ಅಭ್ಯರ್ಥಿಗಳು ಸುಮಾರು 12 ಸಾವಿರಕ್ಕೂ ಅಧಿಕ ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಕೈಕೊಟ್ಟ ಗ್ಯಾರಂಟಿ
ಕಾಂಗ್ರೆಸ್‌ ಈ ಬಾರಿ ಗ್ಯಾರಂಟಿ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿತ್ತು. ಆದರೆ ಹುಸಿಯಾಯಿತು. 8 ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಲೀಡ್‌ ಸಿಕ್ಕಿದೆ. ಉಡುಪಿಯಲ್ಲಿ ನಾಲ್ಕು ಮಂದಿ ಬಿಜೆಪಿ ಶಾಸಕರಿದ್ದರು .

ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಲೀಡ್‌ ಪಡೆಯಲು ಅನುಕೂಲವೂ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇರಲಿಲ್ಲ. ಆದರೆ ಎಲ್ಲ ನಾಲ್ಕು ಕ್ಷೇತ್ರದಲ್ಲಿ ಕನಿಷ್ಠ ತಲಾ 20 ಸಾವಿರಕ್ಕಿಂತ ಅಧಿಕ ಲೀಡ್‌ ಬಂದಿದೆ. ಹೀಗಾಗಿ ರಾಜ್ಯ ಸರಕಾರದ ಗ್ಯಾರಂಟಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ವೈಯಕ್ತಿಕ ವರ್ಚಸ್ಸು ಕೈ ಹಿಡಿಯಲಿಲ್ಲ
ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆಯವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಹುಪಾಲು ತಾವು ಸಂಸದರಾಗಿದ್ದಾಗ ಮಾಡಿದ ಕಾರ್ಯ ಮತ್ತು ತಮ್ಮ ಪ್ರಣಾಳಿಕೆಯನ್ನೇ ಮುಂದಿಟ್ಟುಕೊಂಡು ವೈಯಕ್ತಿಕ ವರ್ಚಸ್ಸಿನ ಅಡಿಯಲ್ಲಿಯೇ ಮತ ಕೇಳಿದ್ದರು. ಆದರೆ ಅಂತಿಮವಾಗಿ ಮತದಾರ ವೈಯಕ್ತಿಕ ವರ್ಚಸ್ಸಿಗೆ ಬೆಲೆ ಕೊಟ್ಟಂತೆ ಕಂಡಿಲ್ಲ. ಮೋದಿ ಅಲೆ ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

Advertisement

ನಿರೀಕ್ಷೆಯೇ ಇರಲಿಲ್ಲ
ಬಿಜೆಪಿಗೆ ಈ ಕ್ಷೇತ್ರ ಗೆಲ್ಲುವ ವಿಶ್ವಾಸವಿತ್ತು. ಆದರೆ ಕನಿಷ್ಠ ಮಾರ್ಜಿನ್‌ನಲ್ಲಿ ಗೆಲ್ಲಬಹುದು, ಒಂದೊಮ್ಮೆ ಗ್ಯಾರಂಟಿ ಕೆಲಸ ಮಾಡಿದರೆ ಗೆಲುವು ಕಷ್ಟ ಎಂಬ ಸ್ಥಿತಿಯಲ್ಲಿ ಬಿಜೆಪಿಯ ಪ್ರಮುಖರಿದ್ದರು. ಆದರೆ, ಅಂತರ ಬಿಜೆಪಿ ನಾಯಕರಲ್ಲೂ ಅಚ್ಚರಿ ತಂದಿದೆ. ಕನಿಷ್ಠ 50 ಸಾವಿರದಿಂದ 1.50 ಲಕ್ಷದವರೆಗೂ ಲೀಡ್‌ ಬರಬಹುದು ಎಂದು ಅಂದಾಜಿಸಿದ್ದರು. ಯಾರು ಕೂಡ 2 ಲಕ್ಷಕ್ಕೂ ಅಧಿಕ ಲೀಡ್‌ ಊಹಿಸಿರಲಿಲ್ಲ.

ನಿರಾಶೆಯಲ್ಲಿ ಕಾಂಗ್ರೆಸ್‌
ಎಲ್ಲ ಸುತ್ತಿನಲ್ಲೂ ಬಿಜೆಪಿ ಲೀಡ್‌ನ‌ಲ್ಲಿದ್ದರೂ ಕಾಂಗ್ರೆಸ್‌ ಆರಂಭದ ಕೆಲವು ಸುತ್ತು ಮುಗಿಯುವವರೆಗೂ ಉತ್ಸಾಹ ಕಳೆದುಕೊಂಡಿರಲಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯ ಮತಗಳಿಕೆಯ ಅಂತರ ಹೆಚ್ಚುತ್ತಿದ್ದಂತೆ ಕಾಂಗ್ರೆಸ್‌ ಪಾಳಯದಲ್ಲಿ ನಿರಾಶೆ ಹೆಚ್ಚತೊಡಗಿತು. ಕಾಂಗ್ರೆಸ್‌ ಕಚೇರಿಯಲ್ಲೂ ಬಿಕೋ ಎನ್ನುವ ವಾತಾವರಣ ಇತ್ತು. ಇತ್ತ ಅಭ್ಯರ್ಥಿ ಕೆ.ಜಯಪ್ರಕಾಶ್‌ ಹೆಗ್ಡೆಯವರು ತಮ್ಮ ಬೆಂಬಲಿಗರೊಂದಿಗೆ ಬೇಸರದಿಂದ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

ಅಂದು ಸೋತರು;
ಇಂದು ಗೆದ್ದರು
ಎರಡು ದಶಕಗಳ ಹಿಂದೆ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೋಟ ಶ್ರೀನಿವಾಸ ಪೂಜಾರಿ 2ಬಾರಿ ಕೆ. ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಸೋಲು ಕಂಡಿದ್ದರು. ಇದೀಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅದೇ ಜಯಪ್ರಕಾಶ್‌ ಹೆಗ್ಡೆ ಎದುರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಜಯ ಸಾಧಿಸುವ ಮೂಲಕ ಅಂದಿನ ಸೋಲನ್ನು ಇಂದಿನ ಜಯದಲ್ಲಿ ಸರಿದೂಗಿಸಿಕೊಂಡಿದ್ದಾರೆ. ಎಂದೋ ಗೆದ್ದವರೆದುರು ಇನ್ನೆಂದೋ ಸೋಲುವ ಪರಿಸ್ಥಿತಿ ಎದುರಾಗುವುದು ಸಹಜ ಎಂಬುದಕ್ಕೆ ಈ ಫ‌ಲಿತಾಂಶ ನಿದರ್ಶನ.

 

Advertisement

Udayavani is now on Telegram. Click here to join our channel and stay updated with the latest news.

Next