Advertisement

Udayavani Interview: ಇಂದಿನಿಂದಲೇ ಸಮರ್ಪಣ ಭಾವದಿಂದ ಕೆಲಸ ಮಾಡುವೆ: ಕೋಟ

12:06 AM Jun 05, 2024 | Team Udayavani |

ಇಡೀ ಕ್ಷೇತ್ರ ಭಿನ್ನವಾಗಿದೆ. ಅಡಕೆ, ಕಾಫಿ ಬೆಳೆಗಾರರ ಸಮಸ್ಯೆ ಮತ್ತು ಮೀನುಗಾರಿಕೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿ ಮುಂದಿನ 5 ವರ್ಷಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುವೆ.  ಸಮರ್ಪಣ ಭಾವದೊಂದಿಗೆ ತತ್‌ಕ್ಷಣದಿಂದಲೇ ಜನ ಸೇವೆಗೆ ತೊಡಗುವೆ.

Advertisement

ಇಷ್ಟು ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಇತ್ತೇ?

– ಗೆಲ್ಲುತ್ತೇನೆ ಎಂಬ ಸ್ಪಷ್ಟ ವಿಶ್ವಾಸ ಇತ್ತು. ಅಂತರದ ನಿರೀಕ್ಷೆ ಇರಲಿಲ್ಲ. ನಿರೀಕ್ಷೆಗೂ ಮೀರಿ ಗೆಲವು ಸಾಧ್ಯವಾಗಿದ್ದರೆ ಅದು ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು, ಮುಖಂಡರ ಸಮನ್ವಯ ಕಾರಣ. ಎಚ್‌. ಡಿ. ದೇವೇಗೌಡರು, ಬಿ.ಎಸ್‌. ಯಡಿ ಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ, ಬಿ.ವೈ. ವಿಜಯೇಂದ್ರ ಹೀಗೆ ಗೆಲುವಿನಲ್ಲಿ ಎಲ್ಲರ ಶ್ರಮವಿದೆ.

ಗ್ರಾ.ಪಂ.ನಿಂದ ಸಂಸತ್‌ವರೆಗಿನ ಪಯಣ ಹೇಗನ್ನಿಸುತ್ತಿದೆ?

ನನ್ನಂತ ಸಾಮಾನ್ಯ ಕಾರ್ಯ ಕರ್ತನನ್ನು ಪಂಚಾಯತ್‌ ಸದಸ್ಯನನ್ನಾಗಿ ಮಾಡಿ, ಅಲ್ಲಿಂದ ಸಂಸತ್‌ ಭವನ ಪ್ರವೇ ಶಿಸುವಂತೆಯೂ ಮಾಡಿದ್ದು ಪಕ್ಷ. ಹೀಗಾಗಿ ಪಕ್ಷಕ್ಕೆ  ಸದಾ ಋಣಿ. ಇದು ದೊಡ್ಡ ಚುನಾವಣೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮರ್ಥ ನಾಯಕತ್ವ, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ಮೋದಿಯವರ ಮೇಲೆ ಜನರು ಇಟ್ಟಿರುವ ವಿಶ್ವಾಸ. ಈ ಎಲ್ಲ ಕಾರಣದಿಂದ ಗೆಲುವು ಸಿಕ್ಕಿದೆ.

Advertisement

ನಿಮ್ಮ ಶಾಸಕರು ಇಲ್ಲದ ಕಡೆಯಲ್ಲೂ ಲೀಡ್‌ ಸಿಕ್ಕಿದ್ದು ಹೇಗೆ?

ಕಾರ್ಕಳ, ಉಡುಪಿ, ಕಾಪು ಹಾಗೂ ಕುಂದಾಪುರದಲ್ಲಿ ನಮ್ಮ ಪಕ್ಷದ ಶಾಸಕರು ಅಭ್ಯರ್ಥಿ ಘೋಷಣೆಯಾದ ಮೊದಲ ದಿನದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದರು. ಶಾಸಕರ ಬಲದಿಂದ ಉಡುಪಿಯ ನಾಲ್ಕು ಕ್ಷೇತ್ರದಲ್ಲಿ ಹೆಚ್ಚಿನ ಲೀಡ್‌ ಪಡೆಯಲು ಸಾಧ್ಯವಾಗಿದೆ. ಚಿಕ್ಕಮಗಳೂರಿನಲ್ಲೂ ನಮ್ಮ ಪಕ್ಷದ ಮತ್ತು ಜೆಡಿಎಸ್‌ ಮುಖಂಡರು ಸಂಘಟಿತ ವಾಗಿ ಹೋರಾಟ ನೀಡಿದ್ದಾರೆ. ಅದರ ಫ‌ಲವಾಗಿ ಉತ್ತಮ ಲೀಡ್‌ ಸಿಕ್ಕಿದೆ.

ದಶಕದ ಹಿಂದಿನ ಸೋಲು, ಈಗ ಗೆಲುವು ಹೇಗನಿಸುತ್ತಿದೆ?

ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ವಿದ್ದ ಸಂದರ್ಭ 1999 ಹಾಗೂ 2004ರ ಚುನಾವಣೆಯಲ್ಲಿ ಜಯ ಪ್ರಕಾಶ್‌ ಹೆಗ್ಡೆ ವಿರುದ್ಧ ಪಕ್ಷದ ಸೂಚನೆ ಯಂತೆ ಸ್ಪರ್ಧಿಸಿ ಸೋತಿದ್ದೆ. ಆ ಸೋಲನ್ನು ಅಷ್ಟೇ ಗೌರವದಿಂದ ಸ್ವೀಕರಿಸಿದ್ದೆ. ಲೋಕಸಭೆ ಚುನಾವಣೆಯಲ್ಲಿ ಪುನಃ ಅವರ ವಿರುದ್ಧ ಸ್ಪರ್ಧೆಗೆ ಪಕ್ಷ ಅವಕಾಶ ಮಾಡಿಕೊಟ್ಟಿತ್ತು. ಆಗ ಮತ್ತೆ ಸೋಲಾಯಿತು. ಈಗ ಗೆಲವು ಸಿಕ್ಕಿದೆ. ಹೆಗ್ಡೆಯವರು ಕಾಂಗ್ರೆಸ್‌ನ ಪ್ರಬಲ ನಾಯಕರು. ವೈಯಕ್ತಿಕ ಚರ್ಚೆ ಇಲ್ಲ. ವ್ಯಕ್ತಿ, ಸ್ಪರ್ಧೆಗಿಂತ ಹೆಚ್ಚಾಗಿ ಚುನಾವಣೆಯನ್ನು ಚುನಾವಣೆಯಾಗಿ, ರಾಜಕಾರಣವನ್ನು ರಾಜಕಾರಣವಾಗಿ ತೆಗೆದುಕೊಂಡಿದ್ದೇನೆ. ಗೆಲುವನ್ನು ಮಾತ್ರ ನೆನಪಿಸಿಕೊಳ್ಳುತ್ತೇನೆ. ಹೆಗ್ಡೆಯವರ ಹಿರಿತನವನ್ನು ಸದಾ ಗೌರವಿಸುತ್ತೇನೆ.

ಭಾಷೆ ಸವಾಲಾಗಲಿದೆಯೇ?

ಮುಂದಿನ ಐದೂವರೆ ತಿಂಗಳಲ್ಲಿ ಹಿಂದಿ ಕಲಿತು, ಅನಂತರವೇ ಅದಕ್ಕೆಲ್ಲ ಉತ್ತರ ನೀಡುವೆ. ಸವಾಲು ಯಾವುದೂ ಅಲ್ಲ, ಕಲಿಯುವೆ.

ಎನ್‌ಡಿಎಗೆ ಬಹುಮತ ಸಿಕ್ಕಿದೆ, ಸರಕಾರ ರಚನೆ ಆಗಲಿದೆಯೇ?

ಭಾರತದ ಗೌರವ ಹೆಚ್ಚಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು. ಸುಧಾರಣೆಯ ದೃಷ್ಟಿಯಿಂದ ಹಲವು ಕಾಯ್ದೆ, ಕಾನೂನು ಜಾರಿ ಮಾಡಿದ್ದಾರೆ. ದೇಶದ ಅಭಿವೃದ್ಧಿ, ಆರ್ಥಿಕ ಸುಧಾರಣೆ ಹೀಗೆ ಹಲವು ಮೈಲುಗಲ್ಲು ಸಾಧಿಸಿದ್ದಾರೆ. ಕಾಂಗ್ರೆಸ್‌ ಕೊನೆಯ ಹಂತದಲ್ಲಿ 1 ಲಕ್ಷ ರೂ.ಗಳ ಬಾಂಡ್‌ ಆಸೆ ತೋರಿಸಿದ್ದಾರೆ. ಹೀಗಾಗಿ ಸ್ವಲ್ಪ ವ್ಯತ್ಯಾಸಗಳು ಆಗಿವೆ. ಆದರೆ ಎನ್‌ಡಿಎ ಅಧಿಕಾರ ನಡೆಸಲಿದೆ ಮತ್ತು ಮೋದಿಯವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಸಂದರ್ಶನ: ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next