Advertisement
ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ಎದುರು ಪೊಲೀಸರು ಮತ್ತು ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರ ನಡುವೆ ಒಂದು ರೀತಿಯ ಶಕ್ತಿ ಪ್ರದರ್ಶನವೇ ನಡೆಯಿತು. ರಾಹುಲ್ ಗಾಂಧಿ ಭಾರತ ಪೊಲೀಸ್ ರಾಜ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಸರಿ ಸುಮಾರು ಮೂವತ್ತು ನಿಮಿಷಗಳ ಕಾಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ವಯನಾಡ್ ಸಂಸದ ಪೊಲೀಸರ ಕ್ರಮ ಖಂಡಿಸಿ ರಸ್ತೆಯಲ್ಲಿಯೇ ಕುಳಿತುಬಿಟ್ಟರು. ನಂತರ ಪೊಲೀಸರು ಅವರನ್ನು ಮಾತ್ರ ಪ್ರತ್ಯೇಕ ವಾಹನದಲ್ಲಿ ಕರೆದುಕೊಂಡು ಹೋದರು. “ಭಾರತ ಈಗ ಪೊಲೀಸ್ ರಾಜ್ಯವಾಗಿದೆ. ಮೋದಿಜಿ ಅದಕ್ಕೆ ರಾಜ’ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.
Related Articles
Advertisement
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿ “ನಮ್ಮ ಪಕ್ಷದ ಎಲ್ಲಾ ಸಂಸದರನ್ನು ವಿಜಯ ಚೌಕ್ ಬಳಿ ತಡೆದಿದ್ದಾರೆ. ಬಸ್‌ನಲ್ಲಿ ಇರುವ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರಿಗೆ ಮಾತ್ರ ಗೊತ್ತಿದೆಯೇನೋ? ಎಂದು ಬರೆದುಕೊಂಡಿದ್ದರು.
ಪ್ರಿಯಾಂಕಾ ಆಕ್ರೋಶ:ವಿಚಾರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ “ಬಿಜೆಪಿ ನಿರಂಕುಶವಾದಿಯಂತೆ ವರ್ತಿಸುತ್ತಿದೆ. ಜತೆಗೆ ಪ್ರತಿಪಕ್ಷಗಳ ನಿಲುವನ್ನು ಹತ್ತಿಕ್ಕಲು ಮುಂದಾಗಿದೆ. ಸಂಸತ್‌ನಲ್ಲಿ ಜನರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶವೇ ನೀಡಲಾಗುತ್ತಿಲ್ಲ’ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಂದಿರಾ ಗಾಂಧಿಯವರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಫೋಟೋ ಮತ್ತು ರಾಹುಲ್ ಗಾಂಧಿ ಕುಳಿತ ಫೋಟೋ ಟ್ವೀಟ್ ಮಾಡಿದೆ. ಜತೆಗೆ “ಇತಿಹಾಸದ ಪುನರಾವರ್ತನೆಯಾಗುತ್ತಿದೆ. ಸರಪಣಿಯನ್ನು ತಾ ಮತ್ತು ನನ್ನನ್ನು ಬಂಧಿಸು’ ಎಂದು ಹಿಂದಿಯಲ್ಲಿ ಬರೆದುಕೊಳ್ಳಲಾಗಿದೆ. ದೇಶಾದ್ಯಂತ:
ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಸೋನಿಯಾ ವಿಚಾರಣೆ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶ್ರೀನಿವಾಸ್ ತಲೆಕೂದಲು ಎಳೆದ ಪೊಲೀಸರು
ಯುವ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಬಿ.ವಿ.ಶ್ರೀನಿವಾಸ್ ಅವರನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ತಲೆ ಕೂದಲು ಹಿಡಿದು ಎಳೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆಯುವ ವೇಳೆ ಈ ಘಟನೆ ನಡೆದಿದೆ. “ಪೊಲೀಸರು ನನ್ನನ್ನು ಹಿಡಿದು ಎಳೆದರು ಮತ್ತು ತಲೆಕೂದಲು ಹಿಡಿದು ಎಳೆದಿದ್ದಾರೆ’ ಆರೋಪಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸರು, ಇಂಥ ಘಟನೆಗೆ ಕಾರಣರಾದ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ