Advertisement

National Film Awards 2023: ಕನ್ನಡ ಪ್ರಾದೇಶಿಕ ವಿಭಾಗಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು

11:54 PM Aug 25, 2023 | Team Udayavani |

ಬೆಂಗಳೂರು: ಅರುವತ್ತಾರನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಕನ್ನಡ ಪ್ರಾದೇಶಿಕ ವಿಭಾಗಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಸಂದಿವೆ. ಪ್ರಾದೇಶಿಕ ಸಿನೆಮಾ ವಿಭಾಗದಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ “777 ಚಾರ್ಲಿ’ ಕನ್ನಡದ ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ನಾನ್‌ ಫೀಚರ್‌ ವಿಭಾಗದಲ್ಲಿ ನಟ ಅನಿರುದ್ಧ್ ಜತ್ಕಾರ್‌ ನಿರ್ದೇಶನ ಮಾಡಿರುವ “ಬಾಳೆ ಬಂಗಾರ’ ಡಾಕ್ಯುಮೆಂಟರಿಗೆ ತೀರ್ಪುಗಾರರ ವಿಶೇಷ ಮೆಚ್ಚುಗೆ ಲಭಿಸಿದೆ. ನಾನ್‌ ಫೀಚರ್‌ ವಿಭಾಗದಲ್ಲಿ ಅತ್ಯುತ್ತಮ ಅನ್ವೇಷಣೆ ಸಿನೆಮಾ ವಿಭಾಗದಲ್ಲಿ ಕನ್ನಡದ “ಆಯುಷ್ಮಾನ್‌’ ಸಿನೆಮಾಕ್ಕೆ ಪ್ರಶಸ್ತಿ ಲಭಿಸಿದೆ. ಹಿರಿಯ ಚಲನಚಿತ್ರ ಪತ್ರಕರ್ತ ಬಿ.ಎನ್‌ ಸುಬ್ರಹ್ಮಣ್ಯ ಅವರಿಗೆ ಸಿನೆಮಾ ವಿಮರ್ಶೆ ಜ್ಯೂರಿ ಪ್ರಶಸ್ತಿ ಲಭಿಸಿದೆ.

ಕನ್ನಡದ “ಆಯುಷ್ಮಾನ್‌’ಗೆ ಪ್ರಶಸ್ತಿ
ನಾನ್‌ ಫೀಚರ್‌ನ ಅತ್ಯುತ್ತಮ ಅನ್ವೇಷಣೆ ಸಿನೆಮಾ ವಿಭಾಗದಲ್ಲಿ ಕನ್ನಡದ “ಆಯುಷ್ಮಾನ್‌’ಗೆ ಪ್ರಶಸ್ತಿ ಲಭಿಸಿದೆ. ಈ ಹಿಂದೆ ಪುನೀತ್‌ ರಾಜಕುಮಾರ್‌ ಅಭಿನಯದ “ಪೃಥ್ವಿ’, “ಸವಾರಿ’, “ಚಂಬಲ…’ ಸಹಿತ ಕನ್ನಡದಲ್ಲಿ ಹಲವು ಸಿನೆಮಾಗಳನ್ನು ನಿರ್ದೇಶಿಸಿದ್ದ ಜೇಕಬ್‌ ವರ್ಗೀಸ್‌ ನಿರ್ದೇಶನ ಈ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ಮ್ಯಾಥ್ಯೂ ವರ್ಗೀಸ್‌, ದಿನೇಶ್‌ ರಾಜಕುಮಾರ್‌ ಮತ್ತು ನವೀನ್‌ ಫ್ರಾನ್ಸಿಸ್‌ ಈ ಸಿನೆಮಾವನ್ನು ನಿರ್ಮಾಣ ಮಾಡಿದ್ದಾರೆ.

“ಬಾಳೆ ಬಂಗಾರ’ ಭಾರತಿ ಜೀವನಗಾಥೆ
ಹಿರಿಯ ಬಹುಭಾಷಾ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ|ಭಾರತಿ ವಿಷ್ಣುವರ್ಧನ್‌ ಅವರ ಜೀವನ ಮತ್ತು ಸಾಧನೆಗಳ ಕುರಿತು ತಯಾರಾಗಿರುವ ಸಾಕ್ಷ್ಯಚಿತ್ರ “ಬಾಳೆ ಬಂಗಾರ’. ಭಾರತಿ ಅವರ ಶಾಲೆ, ಕಾಲೇಜು, ಚಲನಚಿತ್ರಗಳು, ಮದುವೆ, ಜೀವನ ಹೋರಾಟಗಳು ಮತ್ತು ಇತರ ವಿಷಯಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ದಾಖಲಿಸಲಾಗಿದೆ. ಇದು ಹೆಚ್ಚು ಸಂದರ್ಶನ ಆಧಾರಿತ ಸಾಕ್ಷ್ಯಚಿತ್ರವಾಗಿದ್ದು, ನಿರ್ಮಾಣಕ್ಕೆ ಮೂರು ವರ್ಷ ಸಮಯ ತೆಗೆದುಕೊಂಡಿತ್ತು. ಭಾರತಿ ವಿಷ್ಣುವರ್ಧನ್‌ ಅಳಿಯ ನಟ ಅನಿರುದ್ಧ ಜತ್ಕರ್‌ ನಿರ್ದೇಶನದಲ್ಲಿ ಈ ಸಾಕ್ಷ್ಯಚಿತ್ರ ಮೂಡಿಬಂದಿದೆ.

“777 ಚಾರ್ಲಿ’ ಕನ್ನಡದ ಅತ್ಯುತ್ತಮ ಸಿನೆಮಾ
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಾದೇಶಿಕ ಸಿನೆಮಾ ವಿಭಾಗದಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ “777 ಚಾರ್ಲಿ’ ಪ್ರಶಸ್ತಿ ಗೆದ್ದಿದೆ. ಕಿರಣ್‌ ರಾಜ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾವು ಚಿತ್ರ ಮಂದಿರಗಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿದ್ದು, 100 ಕೋಟಿ ರೂ. ಗೂ ಅಧಿಕ ಕಲೆಕ್ಷನ್‌ ಮಾಡಿತ್ತು. ಕನ್ನಡದ ಜತೆಗೆ ಐದು ಭಾಷೆಗಳಲ್ಲಿ ಈ ಸಿನೆಮಾ ಮೂಡಿಬಂದಿದ್ದು, ರಾಜ್‌ ಬಿ. ಶೆಟ್ಟಿ, ದಾನಿಶ್‌ ಸೇs…, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ಮೊದಲಾಣದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ತಮ್ಮ ಹೋಮ್‌ ಬ್ಯಾನರ್‌ “ಪರಂವಃ ಸ್ಟುಡಿಯೋಸ್‌’ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ. ಸಿನೆಮಾಕ್ಕೆ ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನವಿದೆ.

Advertisement

ಪತ್ರಕರ್ತ ಬಿ.ಎನ್‌ ಸುಬ್ರಹ್ಮಣ್ಯಗೆ ಪ್ರಶಸ್ತಿ
ಕನ್ನಡ ಪತ್ರಿಕೋದ್ಯಮದಲ್ಲಿ ಸುಮಾರು 43 ವರ್ಷ ಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿರುವ, ಹಿರಿಯ ಚಲನಚಿತ್ರ ಪತ್ರಕರ್ತ ಬಿ. ಎನ್‌. ಸುಬ್ರಹ್ಮಣ್ಯ (ಬಾನಾಸು) ಅವರಿಗೆ ಸಿನೆಮಾ ವಿಮರ್ಶೆ ಜ್ಯೂರಿ ಪ್ರಶಸ್ತಿ ಲಭಿಸಿದೆ. ಕನ್ನಡದ ಹಲವು ಪತ್ರಿಕೆ ಗಳಿಗೆ ವರದಿ, ಅಂಕಣ ಮತ್ತು ವಿಮರ್ಶೆಗಳನ್ನು ಬರೆಯುತ್ತಿರುವ ಬಿ. ಎನ್‌. ಸುಬ್ರಮಣ್ಯ ಪ್ರಸ್ತುತ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿದ್ದು, ಮೊದಲ ಬಾರಿಗೆ ಪತ್ರಕರ್ತರೊಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next