ಕಲಬುರಗಿ: ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕೆಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ನಿರ್ದೇಶಕಿ ಡಾ| ಕವಿತಾ ಪಾಟೀಲ ಹೇಳಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್‌ಐಟಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2020-21ನೇ ಸಾಲಿನ 35ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ದಾನಗಳಲ್ಲಿ ನೇತ್ರದಾನ ಶ್ರೇಷ್ಠವಾಗಿದೆ ಎಂದರು. ನೇತ್ರದಾನ ಮಾಡಲು ವಯಸ್ಸಿನ ಮಿತಿಯಿಲ್ಲ. ವ್ಯಕ್ತಿ ಮೃತಪಟ್ಟ ಆರು ಗಂಟೆಯೊಳಗಾಗಿ ನೇತ್ರದಾನ ಮಾಡುವ ಮೂಲಕ ಮತ್ತೂಬ್ಬರ ಬಾಳಿಗೆ ಬೆಳಗಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ| ರಾಜಕುಮಾರ ಎ. ಕುಲಕರ್ಣಿ ಮಾತನಾಡಿ, ಆ.25ರಿಂದ ಸೆ.8ರ ವರೆಗೆ 35ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಕಾರ್ನಿಯಾ ಜೋಡಣೆಗಾಗಿ ನೇತ್ರದಾನ ಮಾಡುವುದು ಅವಶ್ಯಕವಾಗಿದೆ. ಭಾರತದಲ್ಲಿ ಸುಮಾರು 1.25 ಲಕ್ಷ ಕಾರ್ನಿಯಾ ಅಂಧರಿದ್ದು, ಪ್ರತಿ ವರ್ಷ ಸುಮಾರು 75,000ರಿಂದ ಒಂದು ಲಕ್ಷದ ವರೆಗೆ ಬೇಡಿಕೆ ಇದೆ. ಇದಕ್ಕಾಗಿ ಎಲ್ಲರೂ ನೇತ್ರದಾನ ಮಾಡಲು ಮುಂದಾಗಬೇಕು ಎಂದರು.
ಅತಿಥಿ ಉಪನ್ಯಾಸಕರಾಗಿ ಡಾ| ಸಂತೋಷ ಪಾಟೀಲ ಹೆಬ್ಟಾಳ್ ನೇತ್ರದಾನದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಣಾಕಾರಿ ಡಾ| ರಾಜಶೇಖರ ಮಾಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ| ವಿಜಯಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಅಂಬರಾಯ್ ರುದ್ರವಾಡಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಪ್ರಭುಲಿಂಗ ಮಾನಕರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ವಿವೇಕಾನಂದ ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಶಿವಕುಮಾರ ದೇಶಮುಖ, ಜಿಲ್ಲಾ ಸಂಚಾರಿ ನೇತ್ರ ಶಸ್ತ್ರಚಿಕಿತ್ಸಾ ಘಟಕದ ಹಿರಿಯ ವೈದ್ಯಾಧಿಕಾರಿ ಡಾ| ಸಂಜೀವಕುಮಾರ್ ಮಹೇಂದ್ರಕರ್ ಹಾಗೂ ಸಿಬ್ಬಂದಿ ಇದ್ದರು.