Advertisement

ಹೊಸ ಲಾಂಛನಕ್ಕೆ  ಸಾರನಾಥವೇ ಮಾದರಿ: ಇದು ಆತ್ಮನಿರ್ಭರ ಭಾರತದ ಪ್ರತೀಕ

01:45 AM Jul 13, 2022 | Team Udayavani |

ಹೊಸದಿಲ್ಲಿ: ಹೊಸ ಸಂಸತ್‌ ಭವನದ ಮೇಲೆ ಅಳವಡಿಸಲಾಗಿರುವ ರಾಷ್ಟ್ರ ಲಾಂಛನದ ಕುರಿತಾಗಿ ಎದ್ದಿರುವ ಆಕ್ಷೇಪಗಳನ್ನು ಕೇಂದ್ರ ಸರಕಾರವು ಸಾರಾಸಗಟಾಗಿ ತಿರಸ್ಕರಿಸಿದ್ದು, ಸಾರಾನಾಥದಲ್ಲಿ ಇರುವ ನಾಲ್ಕು ಸಿಂಹ ಗಳನ್ನು ಆಧರಿಸಿಯೇ ಹೊಸ ವಿನ್ಯಾಸ ಸಿದ್ಧಪಡಿಸಲಾಗಿದೆ ಎಂದಿದೆ.

Advertisement

ಇದು ಆತ್ಮನಿರ್ಭರತೆಯ ಪ್ರತೀಕ ಎಂದು ಹೇಳಿ ರುವ ಕೇಂದ್ರ ಸರಕಾರ, ಅದನ್ನು ಭವನದ ಮೇಲ್ಭಾಗ ದಲ್ಲಿ ಅಳ ವಡಿಸುವುದು ಒಂದು ಸವಾಲಾಗಿತ್ತು. ಲಾಂಛನ ಅತ್ಯುತ್ತಮವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಅತ್ಯಂತ ಶ್ರದ್ಧೆ ಮತ್ತು ನಿರಂತರ ಮೇಲುಸ್ತುವಾರಿಯ ಅಗತ್ಯವಿತ್ತು. ಅದನ್ನು ಅತ್ಯಂತ ಜತನದಿಂದ 32 ಅಡಿ ಎತ್ತರಕ್ಕೆ ಏರಿಸಿ ಅಳ ವಡಿ ಸುವ ಸಾಹಸವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದಿದೆ.

ಆರಂಭದಲ್ಲಿ ಕಂಪ್ಯೂಟರ್‌ ಆಧಾರಿತ ನಕ್ಷೆ ಸಿದ್ಧಪಡಿಸಿ, ಮಣ್ಣಿನ ಮಾದರಿ ಸಿದ್ಧಪಡಿಸಲಾಗಿತ್ತು. ಒಪ್ಪಿಗೆ ಪಡೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶುದ್ಧ ತಾಮ್ರದಲ್ಲಿ ಹೊಸ ಲಾಂಛನ ಸಿದ್ಧಪಡಿಸಲಾಯಿತು. ಹೊಸ ಲಾಂಛನವು ಬದಲಾಗುತ್ತಿರುವ ಭಾರತದ ಸಂಕೇತ ಎಂದೂ ಪ್ರತಿಪಾದಿಸಿದೆ.

ಹೊಸ ಲಾಂಛನದಲ್ಲಿ ಅಳವಡಿಸಲಾದ ಸಿಂಹಗಳು ಉಗ್ರ ಸ್ವರೂಪದವು ಎಂದು ವಿಪಕ್ಷಗಳು ಆರೋಪಿಸಿದ್ದು, ಅದನ್ನು ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿವೆ. ಹೊಸ ಲಾಂಛನದಲ್ಲಿ ಇರುವ ಸಿಂಹಗಳು ಸಾರಾನಾಥ ಸ್ತೂಪದಲ್ಲಿ ಇರುವವುಗಳ್ಳೋ ಅಥವಾ ಗೀರ್‌ ಸಿಂಹಧಾಮದಲ್ಲಿ ಇರುವ ಸಿಂಹಗಳಧ್ದೋ ಎಂದು ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರವು ರಾಷ್ಟ್ರ ಲಾಂಛನಕ್ಕೆ ಅವಮಾನ ಮಾಡಿದೆ. ಮೂಲ ಲಾಂಛನಕ್ಕೆ ಹೋಲಿಸಿದರೆ ಹೊಸತು ತೀರಾ ವ್ಯಗ್ರವಾಗಿದೆ ಮತ್ತು ಪ್ರಧಾನಿಯವರ ದೃಷ್ಟಿಕೋನ ಹೊಂದಿದೆ ಎಂದು ಟಿಎಂಸಿ ಸಂಸದ ಜವಾಹರ್‌ ಸರ್ಕಾರ್‌ ಟೀಕಿಸಿದ್ದಾರೆ.

ಸರಕಾರಕ್ಕೆ ಫ್ರಾಲೆ ಬೆಂಬಲ
ಬ್ರಿಟಿಷರು ಭಾರತದಲ್ಲಿ ನಿರ್ಮಿಸಿದ್ದನ್ನೇ ಉಳಿಸಿಕೊಂಡು ಹೋಗಲು ವಿಪಕ್ಷಗಳು ಆಸಕ್ತಿ ಹೊಂದಿವೆ. ರಾಷ್ಟ್ರ ಲಾಂಛನದ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವುದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಹಿರಿಯ ವಿದ್ವಾಂಸ, ವೇದಾಚಾರ್ಯ ಡೇವಿಡ್‌ ಫ್ರಾಲೆ ಹೇಳಿದ್ದಾರೆ. ಸಿಂಹ ಮತ್ತು ಸ್ತಂಭದ ಇತಿಹಾಸ ವೇದಗಳ ಕಾಲಕ್ಕೆ ಸೇರಿದ್ದು. ಅವು ಹಲವು ಅರ್ಥಗಳನ್ನು ಸೂಚಿಸುತ್ತವೆ ಎಂದು ಫ್ರಾಲೆ ಹೇಳಿದ್ದಾರೆ. ಹಿರಿಯ ಲೇಖಕ ವಿಕಾಸ್‌ ಸಾರಸ್ವತ್‌ ಕೂಡ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಾರಾನಾಥದ ಅಶೋಕ ಸ್ತಂಭದಲ್ಲಿರುವ ಸಿಂಹಗಳು ಮೊಸರನ್ನ ತಿನ್ನುವ ಸಸ್ಯಾಹಾರಿ ವರ್ಗಕ್ಕೆ ಸೇರಿದವು. ಈಗ ಅವು ಗಾಯಕ ಜಾರ್ಜ್‌ ಹ್ಯಾರಿಸನ್‌ ಜತೆ ಸೇರಿ ಪ್ರೀತಿ- ವಿಶ್ವಾಸ ನೀಡಿ, ಭೂಮಿಯಲ್ಲಿ ಶಾಂತಿ ಕಾಪಾಡಿ ಎಂದು ಹಾಡಲು ಆರಂಭಿಸಿವೆ ಎಂದು ವಿಪಕ್ಷಗಳ ಆಕ್ಷೇಪಕ್ಕೆ ವ್ಯಂಗ್ಯವಾಡಿದ್ದಾರೆ.

Advertisement

ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ
ಹೊಸ ಲಾಂಛನ ನಿರ್ಮಾಣಕ್ಕೆ ಸಂಬಂಧಿಸಿ ಯಾರೂ ನನ್ನ ಮೇಲೆ ಪ್ರಭಾವ ಬೀರಿಲ್ಲ ಎಂದು ಶಿಲ್ಪಿ ಸುನಿಲ್‌ ದೋರಿ ಹೇಳಿದ್ದಾರೆ. ಸಾರಾನಾಥದಲ್ಲಿ ಇರುವ ಸಿಂಹ ಗಳ ಕೆತ್ತನೆಯ ಆಧಾರದಲ್ಲಿಯೇ ಹೊಸ ಸಂಸತ್‌ ಭವನದ ಮೇಲಿನ ಲಾಂಛನ ವನ್ನು ನಿರ್ಮಿಸಲಾಗಿದೆ. ಅದನ್ನು ಅಧ್ಯಯನ ನಡೆಸಿದ ಬಳಿಕವೇ ಹೊಸದರ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಮೂಲ ಕೆತ್ತನೆ 3ರಿಂದ 3.5 ಅಡಿ ಇದೆ. ಹೊಸ ಲಾಂಛನ 21.3 ಅಡಿ ಎತ್ತರ ಇದೆ ಎಂದು ದೋರಿ ಹೇಳಿ ದ್ದಾರೆ. ಸಾಮಾ ಜಿಕ ಜಾಲತಾಣಗಳಲ್ಲಿ ಕೆಳಗಿನಿಂದ ತೆಗೆಯಲಾಗಿರುವ ಫೋಟೋ ಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಹೀಗಾಗಿ ಲಾಂಛನದ ಸಿಂಹಗಳು ಉಗ್ರ ವಾಗಿರು ವಂತೆ ಕಾಣುತ್ತಿದೆ. ಜತೆಗೆ ಸಿಂಹಗಳ ಗಾತ್ರ ಕೂಡ ದೊಡ್ಡದಾಗಿದೆ. ಹೀಗಾಗಿ ವ್ಯಗ್ರವಾಗಿರುವಂತೆ ಕಾಣುತ್ತಿವೆ ಎಂದಿದ್ದಾರೆ.

ರಾಜಕೀಯ ಕಾರಣಕ್ಕಾಗಿ ಲಾಂಛನ ಅನಾವರಣ ಮುಂದಿಟ್ಟುಕೊಂಡು ವಿಪಕ್ಷಗಳು ಟೀಕಿಸುತ್ತಿವೆ. ಮೋದಿ ಅವಧಿಯಲ್ಲಿ ಹೊಸ ಸಂಸತ್‌ ಭವನ ನಿರ್ಮಾಣವಾಗುತ್ತಿರುವುದರಿಂದ ಅಸೂಯೆಯಿಂದ ಇಂಥ ಮಾತುಗಳನ್ನಾಡುತ್ತಿದ್ದಾರೆ.
-ಅನಿಲ್‌ ಬಲೂನಿ, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next