Advertisement

Flight: ಹುಸಿ ಬಾಂಬ್‌ ಬೆದರಿಕೆ: ಕಠಿನ ಶಿಕ್ಷೆ ಅಗತ್ಯ

01:04 AM Oct 23, 2024 | Team Udayavani |

ದೇಶದಲ್ಲಿ ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಕರೆಗಳು ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಇದನ್ನು ನಿಗ್ರಹಿಸುವುದಕ್ಕಾಗಿ ಇಂತಹ ಕೃತ್ಯ ಎಸಗಿದ ವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

Advertisement

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರು ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ. ಹುಸಿಬಾಂಬ್‌ ಕರೆ ಮಾಡುವ ಮೂಲಕ ಆವ­ಶ್ಯಕ ಸಾರಿಗೆ ಸೇವೆಗಳಲ್ಲಿ ಒಂದಾಗಿರುವ ವಿಮಾನ ಯಾನಗಳಲ್ಲಿ ವೃಥಾ ವ್ಯತ್ಯಯ ಉಂಟು ಮಾಡುತ್ತಿರುವವರಿಗೆ ಇಂತಹ ಕಠಿನ ಕಾನೂನು ಕ್ರಮ ಜಾರಿಯಾಗಲೇ ಬೇಕು. ವಿಮಾನ ಯಾನ ಸಚಿವರು ಪ್ರಸ್ತಾವಿಸಿರುವ ಶಿಕ್ಷೆಯನ್ನು ಸೂಕ್ತ ನಿಯಮ ಬದಲಾವಣೆಗಳ ಮೂಲಕ ಆದಷ್ಟು ಶೀಘ್ರವಾಗಿ ಜಾರಿಗೆ ತರಲೇ ಬೇಕಾಗಿದೆ.

ಹಿಂದೆಲ್ಲ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿದ್ದ ಹುಸಿಬಾಂಬ್‌ ಕರೆ ಬೆದರಿಕೆಗಳು ಕೆಲವು ವಾರಗಳಿಂದ ವಿಪರೀತ ಎಂಬಂತೆ ಹೆಚ್ಚಾಗಿವೆ. ದುಷ್ಕರ್ಮಿಗಳಿಗೆ ಇದೊಂದು ಹುಚ್ಚಾಟದಂತೆ ಆಗಿಬಿಟ್ಟಿದೆ ಎಂದರೆ ಅತಿಶಯೋಕ್ತಿ ಅಲ್ಲ. ಅದರಲ್ಲೂ ವಿಮಾನ ಯಾನ ಸೇವೆಯನ್ನು ಗುರಿಯಾಗಿ ಇರಿಸಿಕೊಂಡು ಕಳೆದ ವಾರವೊಂದರಲ್ಲಿ ಬಂದಿರುವ ಹುಸಿ ಬಾಂಬ್‌ ಬೆದರಿಕೆ ಕರೆಗಳ ಸಂಖ್ಯೆ ನೂರನ್ನು ದಾಟಿದೆ.

ವಿಮಾನ ಯಾನ ಸಚಿವರು ಕಠಿನ ಶಿಕ್ಷೆಯನ್ನು ಪ್ರಸ್ತಾವಿಸಿದ ಸೋಮವಾರ ದಿನವೇ ರಾತ್ರಿ ಮತ್ತೆ 30 ವಿಮಾನಗಳಿಗೆ ಇಂತಹ ಬೆದರಿಕೆಗಳು ಎದುರಾಗಿವೆ ಎಂದರೆ ಪರಿಸ್ಥಿತಿಯ ಕಳವಳಕಾರಿ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬಹುದು. ಇಂತಹ ಹುಸಿ ಬೆದರಿಕೆಗಳಿಂದ ಮುಂದೊಂದು ದಿನ “ತೋಳ ಬಂತು ತೋಳ’ ಕಥೆಯ ಪರಿಸ್ಥಿತಿ ನಿರ್ಮಾಣಗೊಂಡರೂ ಅಚ್ಚರಿ ಇಲ್ಲ. ಅಂದರೆ ನಿಜವಾದ ಬೆದರಿಕೆ ಕರೆಯನ್ನು ನಿರ್ಲಕ್ಷಿಸಿಬಿಡುವ ಅಥವಾ ಅನಾಹುತ ಸಂಭವಿಸಿಬಿಡುವ ಅಪಾಯವಿದೆ.

ಹೀಗಾಗಿ ಇಂತಹ ಕಿಡಿಗೇಡಿಗಳನ್ನು ನಿಗ್ರಹಿಸಲೇ ಬೇಕು.ಹಿಂದೆ ವಿಮಾನ ಯಾನ ವಿಲಾಸಿ ವಿಷಯವಾಗಿತ್ತು. ಆದರೆ ಈಗ ಅದು ಸಮಯ ಮತ್ತು ದೂರದ ದೃಷ್ಟಿಯಿಂದ ಬಹಳ ಮೌಲ್ಯಯುತವಾದ ಆವಶ್ಯಕ ಸೇವೆ. ಒಂದು ನಿಗದಿತ ವಿಮಾನ ಯಾನದಲ್ಲಿ ವ್ಯತ್ಯಯ ಉಂಟಾದರೆ ಅಥವಾ ಅದು ರದ್ದಾದರೆ ಆಗುವ ಪರಿಣಾಮಗಳು ಬಹು ಆಯಾಮದಲ್ಲಿರುತ್ತವೆ. ಸಾಮಾನ್ಯವಾಗಿ ವರದಿಯಾಗುವುದು ಬೆದರಿಕೆ ಕರೆ, ಅದರ ಬೆನ್ನಿಗೆ ವಿಮಾನ ಯಾನ ಸಂಸ್ಥೆ ಕೈಗೊಂಡ ಮುಂಜಾಗ್ರತೆಯ ಕ್ರಮಗಳು ಇತ್ಯಾದಿ ಮಾತ್ರ. ಹೆಚ್ಚೆಂದರೆ ಎಷ್ಟು ಮಂದಿ ಯಾನಿಗಳಿಗೆ ತೊಂದರೆಯಾಯಿತು ಎಂಬುದು ವರದಿ ಯಾಗಬಹುದು. ಆದರೆ ಈ ಯಾನಿಗಳು ಎಂತೆಂತಹ ತೊಂದರೆಗಳಿಗೆ ಈಡಾದರು ಎಂಬಿತ್ಯಾದಿ ವಿವರಗಳು ಪ್ರಕಾಶಕ್ಕೆ ಬರುವುದೇ ಇಲ್ಲ. ಸಮಸ್ಯೆ ಅನುಭವಿಸಿದ ಯಾನಿಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಉದ್ಯಮ ಒಪ್ಪಂದ ಕುದುರಿಸಲು ಹೊರಟ ಉದ್ಯಮಿ ಇದ್ದಿರಬಹುದು, ತುರ್ತು ಚಿಕಿತ್ಸೆಯ ನಿರೀಕ್ಷೆಯಲ್ಲಿರುವ ರೋಗಿಯನ್ನು ಬದುಕಿಸಲು ಹೊರಟ ವೈದ್ಯನಿರಬಹುದು.

Advertisement

ಹೀಗೆ ಸಮಯ ಮತ್ತು ದೂರದ ದೃಷ್ಟಿಯಿಂದ ಬಹಳ ಅಮೂಲ್ಯವಾದ ಸೇವೆಯಾಗಿರುವ ವಿಮಾನ ಯಾನದಲ್ಲಿ ಆಗುವ ವ್ಯತ್ಯಯದಿಂದ ಆಗುವ ಪರಿಣಾಮಗಳು, ಪಶ್ಚಾತ್‌ ಪರಿಣಾಮಗಳು ಬಹು ವಿಧವಾಗಿದ್ದು, ದೂರಗಾಮಿಯಾಗಿರುತ್ತವೆ.

ಹೀಗಾಗಿಯೇ ವಿಮಾನ ಯಾನವನ್ನು ಹುಸಿ ಬೆದರಿಕೆ ಕರೆಗಳಿಂದ ಅಡ್ಡಿಪಡಿಸುವ ದುಷ್ಟರಿಗೆ ತಕ್ಕ ಶಾಸ್ತಿ ಆಗಲೇ ಬೇಕು. ಅದು ಇನ್ನೆಂದೂ ಇಂತಹ ಕೃತ್ಯಕ್ಕೆ ಮುಂದಾ ಗದಂತೆ ಪಾಠವಾಗಬೇಕು. ಈಗಿನ ಸುಧಾರಿತ ತಾಂತ್ರಿಕತೆ ಬಳಸಿ ಬೆದರಿಕೆ ಹಾಕುತ್ತಿರುವುದರಿಂದ ಅವರ ಜಾಡು ತಿಳಿಯುವುದು ಕಷ್ಟಸಾಧ್ಯ ಎಂಬಂತಿದೆ. ಆದರೆ ಇದನ್ನೂ ತಂತ್ರಜ್ಞಾನವನ್ನು ಉಪಯೋಗಿಸಿಯೇ ಬೇಧಿಸಿ ದುರುಳರನ್ನು ನಿಗ್ರಹಿಸಬೇಕು. ಸರಕಾರ, ನಾಗರಿಕ ವಿಮಾನ ಯಾನ ಸಚಿವಾಲಯ ಈ ಕಾರ್ಯವನ್ನು ಆದಷ್ಟು ಬೇಗನೆ ಮಾಡಲಿ. ಪೊಲೀಸ್‌, ಗುಪ್ತಚರ ಇಲಾಖೆಗಳು ಮತ್ತು ನಾಗರಿಕರು ಕೂಡ ಇಂತಹ ಅಪಸವ್ಯಗಳನ್ನು ಮಟ್ಟಹಾಕಲು ಸಹಕರಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next