ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಅಂಕಣ ಇಂದಿನಿಂದ ಆರಂಭವಾಗು ತ್ತಿದೆ. ಓದುಗರ ಪ್ರಶ್ನೆಗಳಿಗೆ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಉತ್ತರಿಸುತ್ತಾರೆ.
ಎನ್‌ಇಪಿ ಅನುಷ್ಠಾನದಿಂದ ಕನ್ನಡ ಭಾಷೆ ಕಲಿಕೆಗೆ ಹೊಡೆತ ಬೀಳಲಿದೆಯೇ?
–ಮನೋಜ್, ಉಡುಪಿ
– ಡಾ| ಸಿಎನ್‌ಎ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದ ಕನ್ನಡ ಅಥವಾ ಯಾವುದೇ ಪ್ರಾದೇಶಿಕ ಭಾಷೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುವುದಿಲ್ಲ. ಎನ್‌ಇಪಿ ಅನುಷ್ಠಾನದಿಂದ ಕನ್ನಡ ಕಲಿಕೆ ಕಡ್ಡಾಯವಾಗಲಿದೆ. ಇದರಿಂದ ಭಾಷಾಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಎನ್‌ಇಪಿ ಜಾರಿಯಿಂದ ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ.
ನಾನು ಪದವಿ ಸೇರುತ್ತಿದ್ದೇನೆ. ಇನ್ನು ಮುಂದೆ ನಾವು 4 ನಾಲ್ಕು ವರ್ಷ ಓದಬೇಕೇ?
– ಮಹಾಲಕ್ಷ್ಮೀ, ರಾಮನಗರ
– ಡಾ| ಸಿಎನ್‌ಎ: ಹಾಗೇನಿಲ್ಲ. ಈಗ ಇರುವ ಮೂರು ವರ್ಷಗಳ ಪದವಿ ಮುಂದುವರಿಯುತ್ತದೆ. ಆದರೆ ಅದು ಎನ್‌ಇಪಿ ಪರಿಕಲ್ಪನೆಗಳನ್ನು ಅಳವಡಿಸಿ ಕೊಂಡು ಕೆಲವು ಮಾರ್ಪಾಡುಗಳೊಂದಿಗೆ ಇರಲಿದೆ. ಈಗ ಇರುವ 3 ವರ್ಷಗಳ ಪದವಿ ಕೋರ್ಸ್‌ಗೆ 4ನೇ ವರ್ಷವೂ ಸೇರಿಕೊಳ್ಳಲಿದೆ. 4 ವರ್ಷ ಪೂರೈಸಿದವರಿಗೆ ಆನರ್ಸ್ ಪದವಿ ಸಿಗಲಿದೆ. ಇದು ಕಡ್ಡಾಯವಲ್ಲ. ಮೂರು ವರ್ಷಕ್ಕೆ ಪದವಿ ಪೂರೈಸಬಹುದು. ನಾಲ್ಕನೆಯ ವರ್ಷದ ಅಧ್ಯಯನ ಐಚ್ಛಿಕ.
ಎನ್‌ಇಪಿ ಅನುಷ್ಠಾನದಿಂದ ಪಠ್ಯ ಸಂಪೂರ್ಣ ಬದಲಾಗಲಿದೆಯೇ?
–ಕೃಷ್ಣರಾಜ್, ಶಿವಮೊಗ್ಗ
ಡಾ| ಸಿಎನ್‌ಎ: ಇಲ್ಲ. ಆದರೆ ಪರಿಷ್ಕರಣೆ ಗೊಳ್ಳುತ್ತದೆ. ಇದಕ್ಕೆ ಬೇಕಾಗಿ ತಜ್ಞರ ಸಮಿತಿಯನ್ನು ರಚಿಸಿ, ಅಗತ್ಯ ವರದಿಯನ್ನು ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಪರಿಷ್ಕಾರವಾಗುತ್ತದೆ.
ಈ ವರ್ಷ ಪದವಿಗೆ ಎನ್‌ಇಪಿ ಅಡಿಯೇ ಓದಬೇಕೇ?
–ಶ್ರೀಕಾಂತ್, ಕಾರವಾರ
ಡಾ| ಸಿಎನ್‌ಎ: ಶಿಕ್ಷಣ ಸಂಸ್ಥೆ ಅಥವಾ ವಿ.ವಿ. ಮಟ್ಟದಲ್ಲಿ ಆಯ್ಕೆಗೆ ಅವಕಾಶವಿಲ್ಲ. ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಎನ್‌ಇಪಿ ಅನುಷ್ಠಾನಕ್ಕೆ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಮುಂದಿನ ಹಂತದ ಶಿಕ್ಷಣ ಎಲ್ಲವೂ ಎನ್‌ಇಪಿ ಅಡಿಯಲ್ಲೇ ನಡೆಯುತ್ತದೆ.
ಒಂದು ಡೌಟ್ : ನೀವೂ ನಿಮ್ಮ ಪ್ರಶ್ನೆಯನ್ನು ವಾಟ್ಸ್‌ಆ್ಯಪ್ ಮಾಡಿ 8861196369