ಹುಬ್ಬಳ್ಳಿ: ಶಿಕ್ಷಣತಜ್ಞ ಅಬುಲ್ ಕಲಾಂ ಆಜಾದ್ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕತೆ ಒದಗಿಸುವುದೆ ಮುಖ್ಯ ಉದ್ದೇಶವಾಗಿತ್ತಲ್ಲದೆ, ಮಹಿಳಾ ಶಿಕ್ಷಣ, ಸಬಲೀಕರಣಕ್ಕೆ ಹಾಗೂ ಔದ್ಯೋಗಿಕ ಆಧಾರಿತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದರು ಎಂದು ಸ್ಥಳೀಯ ಅಲ್-ಮಿಜಾನ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ, ಎನ್‌ಸಿಟಿಇಯ ಸಂದರ್ಶಕ ಸದಸ್ಯ ಡಾ| ಎನ್.ಬಿ. ಕೊಂಗವಾಡ ಹೇಳಿದರು.
ಹಳೇಹುಬ್ಬಳ್ಳಿ ಟಿಪ್ಪು ಷಹೀದ್ ಪಾಲಿಟೆಕ್ನಿಕ್ ನಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದರ ಜನ್ಮದಿನ ಪ್ರಯುಕ್ತ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಬುಲ್ ಕಲಾಂ ಆಜಾದರ ವ್ಯಕ್ತಿತ್ವ, ಚಿಂತನೆಗಳು, ದೂರದೃಷ್ಟಿ, ದೇಶಪ್ರೇಮ ಅನನ್ಯವಾಗಿತ್ತು.
ಇವರು ಹಾಕಿಕೊಟ್ಟ ಭದ್ರಬುನಾದಿಯಿಂದಲೇ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಸಶಕ್ತವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಮುಲ್ಲಾ ಮಾತನಾಡಿ, ಮೌಲಾನಾ ಅಬುಲ್ ಕಲಾಂ ಆಜಾದ ಅವರು 1951ರಲ್ಲಿ ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಐಸಿಟಿಇ) ಹಾಗೂ 1953ರಲ್ಲಿ ಯುಜಿಸಿ ಸಂಸ್ಥೆ ಜೊತೆಗೆ ಲಲಿತಕಲಾ, ಸಂಗೀತ ಮತ್ತು ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಿದರು.
ನಂತರ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸೆಂಟರ್, ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ಸೈಂಟಿμಕ್ ರಿಸರ್ಚ್ ಸೆಂಟರ್, ಕೌನ್ಸಿಲ್ ಫಾರ್ ಸೈಂಟಿμಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‌ಗಳನ್ನು ಸ್ಥಾಪಿಸಿದರು. ಖೇರ್ ಕಮಿಷನ್, ಮುದಲಿಯಾರ ಕಮಿಷನ್ ರೂಪಿಸಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.
ವಿಭಾಗಾಧಿಕಾರಿಗಳಾದ ಜಿ.ಎಂ. ಪುಡಕಲಕಟ್ಟಿ, ರವೀಂದ್ರಸಿಂಗ್ ಅತ್ತಾರ, ಚಂದ್ರಶೇಖರ ತುಪ್ಪದ, ಶ್ರೀಮತಿ ಎಫ್.ಎಚ್. ಕಿತ್ತೂರ, ಅಬ್ದುಲ್ ರಜಾಕ್ ಮುಲ್ಲಾ, ಬಾಳೇಶ ಹೆಗ್ಗಣ್ಣನವರ, ಎಂ.ಎಚ್. ಧಾರವಾಡ, ಅಧೀಕ್ಷಕ ಎ.ಎ. ಕಿತ್ತೂರು ಮೊದಲಾದವರಿದ್ದರು. ಸುರೇಶ ಪಾಟೀಲ ಸ್ವಾಗತಿಸಿದರು. ಕಿರಣಕುಮಾರ ಮಂಟೂರ ನಿರೂಪಿಸಿದರು. ಬಾಳೇಶ ಹೆಗ್ಗಣ್ಣವರ ವಂದಿಸಿದರು.