Advertisement

ರಾಷ್ಟ್ರೀಯ ಪುಸ್ತಕ ವಾರ- ಸಾಹಿತ್ಯ ಕಾರ್ಯಕ್ರಮ

01:16 PM Nov 15, 2017 | Team Udayavani |

ಬಾವುಟಗುಡ್ಡೆ: ತಂತ್ರಜ್ಞಾನ ಎಷ್ಟೇ ಬೆಳೆದರೂ ಅದರಿಂದ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವ ಸಂತೃಪಿ ಸಿಗಲು ಸಾಧ್ಯವಿಲ್ಲ. ಪ್ರಸ್ತುತ ಅಂತರ್ಜಾಲದಲ್ಲಿ ಇ- ಪುಸ್ತಕಗಳು ಲಭ್ಯವಾಗುತ್ತಿದ್ದರೂ ಪುಸ್ತಕದೊಂದಿಗಿನ ನೇರವಾದ ಅವಿನಾಭಾವ ಸಂಬಂಧ ಏರ್ಪಡಲು ಸಾಧ್ಯವಿಲ್ಲ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ ಹೇಳಿದರು.

Advertisement

ಅವರು ನಗರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಸಾಹಿತ್ಯ ಅಕಾಡೆಮಿ ವತಿಯಿಂದ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆಯುವ ರಾಷ್ಟ್ರೀಯ ಪುಸ್ತಕ ವಾರ- ಸಾಹಿತ್ಯ ಕಾರ್ಯಕ್ರಮಗಳು ಹಾಗೂ ಪುಸ್ತಕ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿದರು.

ಸಾಹಿತ್ಯಾಭಿರುಚಿ ಅಗತ್ಯ
ದೇಶಗಳ ಪುಸ್ತಕ ಅಂಗಡಿಗಳಲ್ಲಿ ಆಯ್ಕೆಗೆ ಹಲವು ವಿಧಾನಗಳ ಜತೆಗೆ ಅಲ್ಲೇ ಕುಳಿತು ಓದುವ ವ್ಯವಸ್ಥೆ ಇರುತ್ತದೆ. ಹೀಗಾಗಿ ಅಲ್ಲಿ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ಭಾರತದಲ್ಲಿ ಬಹುತೇಕ ಪುಸ್ತಕಗಳು ಓದುಗರಿಗೆ ಸಿಗದೆ ಓದಿನಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಲ್ಲಿ ನಾವು ಸಾಹಿತ್ಯಾಭಿರುಚಿಯನ್ನು ಬೆಳೆಸಿದಾಗ ಮಾತ್ರ ಸಾಹಿತ್ಯ ಬೆಳೆಯಲು ಸಾಧ್ಯ ಎಂದರು.

ಏಕೀಕರಣವಾಗಿಲ್ಲ
ಪ್ರಾದೇಶಿಕವಾಗಿ ಕರ್ನಾಟಕ ಏಕೀಕರಣಗೊಂಡಿದ್ದರೂ ಪುಸ್ತಕದ ವಿಚಾರದಲ್ಲಿ ಏಕೀಕರಣಗೊಂಡಿಲ್ಲ. ಕರಾವಳಿಯ ಪುಸ್ತಕಗಳು ಉತ್ತರ ಕರ್ನಾಟಕದಲ್ಲಿ, ಮೈಸೂರಿನ ಸಾಹಿತ್ಯಗಳು ಕರಾವಳಿಯಲ್ಲಿ ಲಭ್ಯವಾಗುತ್ತಿಲ್ಲ. ಇದರಿಂದ ಸಾಹಿತ್ಯ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ಡಾ| ನಾ. ದಾಮೋದರ ಶೆಟ್ಟಿ ಮಾತನಾಡಿ, ನಾವು ಪುಸ್ತಕದಲ್ಲಿ ಓದಿದ ಜ್ಞಾನ ಮಾತ್ರ ನಮ್ಮನ್ನು ಕೊನೆಯವರೆಗೆ ಕೈ ಹಿಡಿಯುತ್ತದೆ. ಆದರೆ ಇಂದಿನ ಮಕ್ಕಳು ಮೊಬೈಲ್‌ನ ದಾಸರಾಗಿ ಸಮಯ ಹಾಳು ಮಾಡುತ್ತಿದ್ದಾರೆ. ಮಕ್ಕಳಲ್ಲಿ ಪುಸ್ತಕದ ಜ್ಞಾನ ಬೆಳೆಯಬೇಕಿದೆ ಎಂದರು. ಪ್ರದರ್ಶನವು ನ. 20ರ ವರೆಗೆ ನಡೆಯಲಿದೆ.

Advertisement

ಪ್ರಾಂಶುಪಾಲ ರೆ| ಫಾ| ಪ್ರವೀಣ್‌ ಮಾರ್ಟಿಸ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್‌.ಪಿ. ಮಹಾಲಿಂಗೇಶ್ವರ ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಸರಸ್ವತಿ ಕುಮಾರಿ ಕೆ. ವಂದಿಸಿದರು. ಆಯಿಷಾ ಶಾರಿಯಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next