Advertisement

ಹಳ್ಳಿಗಳಲ್ಲಿ ರಾಷ್ಟ್ರಪ್ರೇಮ ಜಾಗೃತಿ

06:20 AM Aug 06, 2018 | |

ಬೆಂಗಳೂರು: ಹಳ್ಳಿಗಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಿ ಆ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಗ್ರಾಮೀಣ ಭಾಗದ ಮಕ್ಕಳು ಹಾಗೂ ಯುವಕರಿಗೆ ಪ್ರೇರಣೆ ಸಿಗುವಂತಾಗಲು ಸ್ವಾತಂತ್ಯ ದಿನಾಚರಣೆ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ  ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಸ್ಮರಣೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕಡ್ಡಾಯಗೊಳಿಸಿದೆ.

Advertisement

ಅದರಂತೆ ಈ ಬಾರಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ವೇಳೆ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಸ್ವಾತಂತ್ರೋತ್ಸವದಲ್ಲಿ ಸ್ವಾತಂತ್ಯಕ್ಕಾಗಿ ಹೋರಾಡಿ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಸ್ವಾತಂತ್ರ್ಯ ಯೋಧರನ್ನು ಗುರುತಿಸಿ ಅವರ ಸೇವೆ, ತ್ಯಾಗ ಬಲಿದಾನವನ್ನು ಸ್ಮರಿಸುವಂತೆ ಮತ್ತು ದೇಶದ ರಕ್ಷಣೆಗಾಗಿ ವೀರ ಮರಣವನ್ನಪ್ಪಿದ ಹುತಾತ್ಮ ವೀರ ಯೋಧರ ಸ್ಮರಣೆ ಮಾಡಿ ಅವರ ಕುಟುಂಬದವನ್ನು ಕರೆದು ಗೌರವಿಸುವಂತೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಡೆಯುತ್ತದೆ. ಆದರೆ, ಸ್ಥಳೀಯ ಮಹನೀಯರ ಸೇವೆ, ತ್ಯಾಗ ಮತ್ತು ಬಲಿದಾನದ ಸ್ಮರಣೆ ಅಷ್ಟಾಗಿ ನಡೆಯುವುದಿಲ್ಲ. ಹಾಗಾಗಿ, ಆಗಸ್ಟ್‌ 15ರಂದು ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಸ್ವಾತಂತ್ರೊéàತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವಂತಾಗಬೇಕು ಎಂದು ವಿವಿಧ ಸಂಘ-ಸಂಸ್ಥೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ಆ ಪ್ರಕಾರ, ಸ್ವಾತಂತ್ರ್ಯ ದಿನಾಚರಣೆ ವೇಳೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕಡ್ಡಾಯಗೊಳಿಸಿರುವ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಆ.15 ಅಷ್ಟೇ ಅಲ್ಲ, ಸಂವಿಧಾನ ಜಾರಿಗೆ ಬಂದ ಗಣರಾಜೋತ್ಸವ (ಜನವರಿ 26) ಹಾಗೂ ಹುತಾತ್ಮರ ದಿನ (ಜ.30) ಕೂಡ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಯೋಧರ ಮತ್ತು ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ಅರ್ಪಿಸಿದ ವೀರ ಯೋಧರನ್ನು ಸ್ಮರಿಸುವುದರ ಜತೆಗೆ ಅವರ ಕುಟುಂಬದವರನ್ನು ಗೌರವಿಸುವಂತೆ ಸೂಚಿಸಿದೆ.

ರಾಷ್ಟ್ರ ಪ್ರೇಮ ಜಾಗೃತಿ:
ದೇಶಾದ್ಯಂತ ಅಸಂಖ್ಯಾತ ಮಹನೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಬಲಿದಾನ ನೀಡಿದ್ದಾರೆ. ಈ ಮಹನೀಯರ ತ್ಯಾಗ ಮತ್ತು ಬಲಿದಾನದ ಫ‌ಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಇವರ ಸ್ಮರಣೆಯಿಂದ ಯುವ ಜನಾಂಗದಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವ ಉದ್ದೇಶದಿಂದ ಇಲಾಖೆ ಈ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಸಾಮಾನ್ಯವಾಗಿ ಆ. 15ರಂದು ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಸ್ವಾತಂತ್ರೊéàತ್ಸವ ಆಚರಣೆ ನಡೆಯುತ್ತದೆ. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಣೆಯೂ ನಡೆಯತ್ತದೆ. ಅವರ ತ್ಯಾಗ, ಬಲಿದಾನಗಳನ್ನು ನೆನಪಿಸುವ ಭಾಷಣಗಳು, ನೃತ್ಯ ರೂಪಕ, ಹಾಡು ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಬಹುತೇಕ ಈ ಎಲ್ಲ ಕಾರ್ಯಕ್ರಮಗಳು ರಾಷ್ಟ್ರಮಟ್ಟದ ಮಹನೀಯರ ಸ್ಮರಣೆಗೆ ಸೀಮಿತವಾಗಿರುತ್ತದೆ.

ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ಮತ್ತು ಈಗಲೂ ಬದುಕುಳಿದ ಸ್ಥಳೀಯ ಮಹನೀಯರು ಇರುತ್ತಾರೆ. ಅಂತಹವರನ್ನು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿನ ಸ್ವಾತಂತ್ರ್ಯ ದಿನದಂದು ಗುರುತಿಸಿ ಅವರ ಸೇವೆ, ತ್ಯಾಗಗಳನ್ನು ಸ್ಮರಿಸಿದರೆ ಸ್ಥಳೀಯರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳ್ಳುತ್ತದೆ. ಆ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅವರು ಇನ್ನಷ್ಟು ಸಕ್ರೀಯವಾಗಿ ತೊಡಗಿಸಿಕೊಳ್ಳಬಹುದು. ಅದೇ ರೀತಿ ದೇಶ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರನ್ನು ಸ್ಮರಿಸಿ ಅವರ ಕುಟುಂಬದವರನ್ನು ಗೌರವಿಸಿದರೆ, ಯುವಕರಲ್ಲಿ ಸೇನೆಗೆ ಸೇರುವ ಭಾವನೆ ಮೂಡುತ್ತದೆ ಎಂಬುದು ಅಧಿಕಾರಿಗಳ ಸಮರ್ಥನೆ.

ಗ್ರಾಮೀಣ ಭಾಗದ ಯುವ ಜನಾಂಗದಲ್ಲಿ ರಾಷ್ಟ್ರ ಪ್ರೇಮ ಜಾಗೃತಗೊಳಿಸಿ ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಆ.15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ ಮತ್ತು ಜನವರಿ 30ರ ಹುತಾತ್ಮ ದಿನಾಚರಣೆ ವೇಳೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರ ಸ್ಮರಣೆ ಮತ್ತು ಅವರ ಕುಟುಂದವರನ್ನು ಗೌರವಿಸಲು ಒತ್ತು ನೀಡುವಂತೆ ಗ್ರಾಮ ಪಂಚಾಯ್ತಿಗಳಿಗೆ ಸುತ್ತೋಕೆ ಮೂಲಕ ಸೂಚಿಸಲಾಗಿದೆ.
– ಎಂ.ಕೆ. ಕೆಂಪೇಗೌಡ, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಇಲಾಖೆ

– ರಫೀಕ್‌ ಅಹ್ಮದ್‌
 

Advertisement

Udayavani is now on Telegram. Click here to join our channel and stay updated with the latest news.

Next