Advertisement
ಹೊಸದಿಲ್ಲಿಯಲ್ಲಿ 70ನೇ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಮರಳಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂತಾರ ಈ ಭಾಗದಲ್ಲಿ ಮಾಡಿದ ಸಿನಿಮಾ, ದೈವದ ಬಗ್ಗೆ ಹಾಗೂ ದೈವ ನರ್ತಕರ ಬಗ್ಗೆ ಹೇಳುವ ಸಿನಿಮಾ ಆಗಿರುವುದರಿಂದ ಆ ಸಮುದಾಯಕ್ಕೆ ಸಿಗಬೇಕಾಗಿರುವ ಪ್ರಶಸ್ತಿ. ದೈವದ ಆಶೀರ್ವಾದ ಇಲ್ಲದಿದ್ದರೆ ಇಲ್ಲಿಯವರೆಗೆ ಬರುವುದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಕಾಂತಾರ -2 ಚಿತ್ರ ಶೂಟಿಂಗ್ ನಡೆಯುತ್ತಿದ್ದು, ಅತಿ ಶೀಘ್ರದಲ್ಲೇ ನಿರ್ಮಾಪಕರು ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಿಸಲಿದ್ದಾರೆ ಎಂದರು. ದೈವಾರಾಧನೆಯ ಚಿತ್ರದ ವಸ್ತುವಾಗಿ ಬಳಸುವುದಕ್ಕೆ ಎದುರಾಗಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ದೈವಾರಾಧನೆ ವಸ್ತುವಾಗಿರುವ ಚಿತ್ರಗಳು ಬಂದಿವೆ. ತುಳು ಸಿನಿಮಾಗಳಿಗೆ ಪ್ರಶಸ್ತಿ ಕೂಡ ಸಿಕ್ಕಿದೆ. ಕಾಂತಾರ ಜನಪ್ರಿಯತೆ ಪಡೆದಾಗ ದೈವಾರಾದನೆ ಅಪಹಾಸ್ಯ ಮಾಡುವ ರೀತಿಯ ಪ್ರಸಂಗಗಳು ವೇದಿಕೆಗಳಲ್ಲಿ ನಡೆದಾಗ ನನಗೂ ಬೇಸರವಾಗಿದೆ, ನಾನೂ ದೈವಾರಾಧನೆ ಮಾಡುವವನಾಗಿ ಶ್ರದ್ಧೆಯಿಂದ ಚಿತ್ರ ನಿರ್ಮಿಸಿದ್ದೇನೆ, ಅದನ್ನು ಚಿತ್ರದ ರೀತಿಯಲ್ಲಿ ನೋಡಿಲ್ಲ ಎಂದು ಸ್ಪಷ್ಟಪಡಿಸಿದರು.