ನವದೆಹಲಿ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಬದಲು ನೆರೆ ದೇಶದ ರಾಷ್ಟ್ರಗೀತೆ ನುಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಬಿಜೆಪಿ ಕಟುವಾಗಿ ಟೀಕಿಸಿದೆ.
ಮಹಾರಾಷ್ಟ್ರದ ವಾಶೀಂನಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ರಾಷ್ಟ್ರಗೀತೆ ನುಡಿಸಬೇಕು ಎಂದು ಸೂಚಿಸಿದ್ದರು. ಆದರೆ ಈ ವೇಳೆ ಭಾರತದ ಬದಲು ನೇಪಾಳದ ರಾಷ್ಟ್ರಗೀತೆ ನುಡಿಸಿದ್ದರಿಂದ ರಾಹುಲ್ ಗಾಂಧಿ ತಬ್ಬಿಬ್ಬಾದ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ವೈರಲ್ ವಿಡಿಯೋದಲ್ಲಿ ರಾಹುಲ್ ಗಾಂಧಿ ಈಗ ರಾಷ್ಟ್ರಗೀತ್ ಎಂದು ಹೇಳಿದ್ದು, ವೇದಿಕೆಯಲ್ಲಿದ್ದ ಪ್ರತಿಯೊಬ್ಬರು ಎದ್ದು ನಿಂತಿದ್ದರು. ಆದರೆ ಬೇರೆ ಭಾಷೆಯ ಹಾಡು ನುಡಿಸಿದ್ದನ್ನು ಕೇಳಿದ ರಾಹುಲ್ ಗಾಂಧಿ ತಬ್ಬಿಬ್ಬಾಗಿರುವ ದೃಶ್ಯ ಸೆರೆಯಾಗಿದೆ.
ತಬ್ಬಿಬ್ಬಾದ ರಾಹುಲ್ ಗಾಂಧಿ ನಿರೂಪಕನ ಬಳಿ ಏನಿದು ಎಂದು ಪ್ರಶ್ನಿಸಿದ ನಂತರ ತಕ್ಷಣವೇ ಆ ಹಾಡನ್ನು ನಿಲ್ಲಿಸಿ, ರಾಷ್ಟ್ರಗೀತೆ ಪ್ರಸಾರ ಮಾಡಲಾಯಿತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಹುಲ್ ಗಾಂಧಿ ರಾಷ್ಟ್ರಗೀತೆಯನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದ್ದು, ತಮಿಳುನಾಡು ಬಿಜೆಪಿ ಮುಖಂಡ ಅಮರ್ ಪ್ರಸಾದ್ ರೆಡ್ಡಿ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿ, ರಾಹುಲ್ ಗಾಂಧಿ ಏನಿದು ಎಂದು ಪ್ರಶ್ನಿಸಿದ್ದಾರೆ.