Advertisement
ಒಂದೆಡೆ ಕೋವಿಡ್ ಇನ್ನಿಲ್ಲದ ದುಷ್ಪರಿಣಾಮ ಬೀರಿದರೂ ಮತ್ತೂಂದೆಡೆಯಿಂದ ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವುದು ಕಂಡುಬಂದಿದೆ. ಹಲವು ರಾಷ್ಟ್ರಗಳು ಸದ್ಯದ ಪರಿಸ್ಥಿತಿಯನ್ನು ಪರಿಸರ ಸ್ನೇಹಿಯಾಗಿ ಮಾರ್ಪಾಡಿಸುವತ್ತ ಒಲವು ತೋರುತ್ತಿದ್ದು, ವಾಹನ ದಟ್ಟಣೆಯಿಂದ ಪರಿಸರಕ್ಕಾಗುತ್ತಿದ್ದ ಮಾಲಿನ್ಯ ಮಟ್ಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿವೆ ಎಂದು ಮೇಡ್ ಫಾರ್ ಮೈಂಡ್ ವರದಿ ಮಾಡಿದೆ.
ಬ್ರಸೆಲ್ ಈಗಾಗಲೇ ಲಾಕ್‌ಡೌನ್ ನಿಯಮಗಳನ್ನು ಒಂದು ಹಂತಕ್ಕೆ ಸಡಿಲಗೊಳಿಸಿದ್ದು, ಸಾರ್ವಜನಿಕ ಸಂಚಾರಕ್ಕೂ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ 25 ಮೈಲಿಗಳ ವ್ಯಾಪ್ತಿಯ ಒಳಗಿನ ಸಂಚಾರಕ್ಕೆ ಸೈಕಲ್‌ಗಳನ್ನು ಬಳಸುವಂತೆ ಹೇಳಿದ್ದು, ಕೋವಿಡ್-19 ಬಳಲಿ ಬೆಂಡಾಗಿರುವ ಜನರು ಚಕಾರವೆತ್ತದೆ ಈ ನಿಯಮ ಪಾಲಿಸುತ್ತಿದ್ದಾರೆ. ಇನ್ನು ಸದಾ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಇದೇ ನಿಯಮವನ್ನು ಅಳವಡಿಸಲಾಗಿದ್ದು, ಬೆರಳಣಿಕೆಯಷ್ಟು ಕಾರುಗಳು ಮಾತ್ರ ರಸ್ತೆಗೆ ಇಳಿದಿವೆ. ಸೀಮಿತ ದೂರದ ಓಡಾಟಕ್ಕಾಗಿ ಜನರು ಸೈಕಲ್‌ಗಳನ್ನು ಬಳಸುತ್ತಿದ್ದಾರೆ. ಕಾಲ್ನಡಿಗೆಗೆ ಮೊರೆ
ಹೆಚ್ಚೆಚ್ಚು ಜನರು ಈಗ ನಾಗರಿಕತೆಯ ಆರಂಭದ ದಿನಗಳಿಂದಲೂ ಇದ್ದ ನಟರಾಜ ಸರ್ವಿಸ್ ಅರ್ಥಾತ್ ಕಾಲ್ನಡಿಗೆಯ ಮೊರೆ ಹೋಗಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಪಾದಚಾರಿಗಳ ಸಂಖ್ಯೆ ಯಲ್ಲಿ ಗಣನೀಯವಾದ ಏರಿಕೆ ಯಾಗಿರುವುದು ಒಂದು ಸಕಾರಾತ್ಮಕವಾದ ಬೆಳವಣಿಗೆ. ಒಂದೆರೆಡು ಕಿ.ಮೀ. ದೂರಕ್ಕೂ ಸಾರ್ವಜನಿಕ ವಾಹನಗಳನ್ನು ಬಳಸುತ್ತಿದ್ದ ಜನರು ಈಗ ನಡೆದು ಹೋಗುವುದನ್ನು ರೂಢಿಸಿ ಕೊಳ್ಳುತ್ತಿದ್ದಾರೆ. ಬೆಲ್ಜಿಯಂ ಸೇರಿ ಇನ್ನೂ ಕೆಲವು ದೇಶಗಳಲ್ಲಿ ಕಡಿಮೆ ದೂರದ ಪ್ರಯಾಣಕ್ಕೆ ಸೈಕಲ್ ಬಳಸುವ ನಿಯಮವನ್ನು ಜಾರಿಗೊಳಿಸಲಾಗಿದೆ. ಕೋವಿಡ್ ಮನು ಷ್ಯರಿಗೆ ಎಷ್ಟೇ ಹಾನಿ ಉಂಟು ಮಾಡಿದ್ದರೂ ಪ್ರಕೃತಿಗೆ ಉಪಕಾರವನ್ನೇ ಮಾಡಿದೆ ಎಂದು ಧಾರಾಳವಾಗಿ ಹೇಳಬಹುದು.