Advertisement

ಕಣ್ಣಂಚಲ್ಲಿ ನೀರು ಹನಿಸಿದ ನೇತ್ರೆ ಬದ್‌ಕ್‌ ಆವಶ್ಯಕತೆ ನಾಟಕ

02:15 PM Dec 22, 2017 | Team Udayavani |

ಉಜಿರೆಯ ಶಾರದಾ ಮಂಟಪದಲ್ಲಿ ಶ್ರೀ ಗುರು ಮಿತ್ರ ಸಮೂಹ ಹಾಗೂ ನವರಸ ಥಿಯೇಟರ್ಸ್‌ ಉಜಿರೆ ವತಿಯಿಂದ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್‌ ಅಮೀನ್‌ ವೇಣೂರು ಪರಿಕಲ್ಪನೆ, ರಚನೆಯ ಸ್ಮಿತೇಶ್‌ ಎಸ್‌. ಬಾರ್ಯ ನಿರ್ದೇಶನದ “ನೇತ್ರೆ ಬದ್‌ಕ್‌ ಅವಶ್ಯಕತೆ’ ಎಂಬ ನಾಟಕದ ಪ್ರದರ್ಶನ ರಾಮಾಯಣದ ಕೊನೆಗೆ ರಾಮ ನಿರ್ಯಾಣದ ಭಾವಪೂರ್ಣ ಸನ್ನಿವೇಶವನ್ನು ನೆನಪಿಸಿತು. 

Advertisement

ದಕ್ಷಿಣ ಕನ್ನಡಿಗರು ನೇತ್ರಾವತಿ ಹಾಗೂ ಕುಮಾರಧಾರಾ ಎಂಬ ಎರಡು ನದಿಗಳನ್ನು ಹೇಗೆ ತಮ್ಮ ಬದುಕಾಗಿ ಸೀÌಕರಿಸಿ ಜೀವನದಿಯಾಗಿಸಿದ್ದಾರೆ, ಅವುಗಳನ್ನು ಜನನಾಡಿಯಿಂದ ಅಗಲುವಂತೆ ಮಾಡಿದರೆ ಇಲ್ಲಿನ ಜನರ ಬದುಕು ಘೋರ, ದುಸ್ತರ ಎನ್ನುವುದನ್ನು ನಾಟಕೀಯವಾಗಿ ತೋರಿಸಿ ದಕ್ಷಿಣ ಕನ್ನಡದ ಜನತೆಗೆ ನೇತ್ರಾವತಿ ಕುಮಾರಧಾರಾ ಬಿಟ್ಟಿರಲು ಸಾಧ್ಯವೇ ಎಂಬ ವಾಸ್ತವ ತೆರೆದಿಟ್ಟಿತು. 

ತೌಳವ ಮತ್ತು ಕಸ್ತೂರಿ ಎಂಬ ಎರಡು ಪಾತ್ರಗಳು ತುಳು ಹಾಗೂ ಕನ್ನಡವನ್ನು ಪ್ರತಿನಿಧಿಸಿದವು. ಕುಮಾರ ಮತ್ತು ನೇತ್ರೆ ಎಂಬ ಪಾತ್ರಗಳು ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳನ್ನು ಪ್ರತಿನಿಧಿಸಿದವು. ಪಿಂಗಾರಪಲ್ಕೆ ಎಂದು ನೇತ್ರಾವತಿ ಉಗಮದ ಬಂಗಾರಪಲ್ಕೆಗೆ ಹೋಲಿಕೆಯಾದರೆ ಚಿನ್ನಾಪುರ ಎಂದು ಕೋಲಾರವನ್ನು ಸಾಕ್ಷಿಯಾಗಿಸಿತ್ತು. ಕಡಲ ಒಡಲಿನ ತೌಳವನಿಗೆ ನೇತ್ರಾವತಿ ಬದುಕಾಗಿದ್ದರೆ ಚಿನ್ನದೂರಿನ ಬಯಲು ನಾಡಿನ ಕಸ್ತೂರಿಗೆ ಅದು ಬರಡಾದ ಬಯಲು ನೆಲಕ್ಕೆ ಅವಶ್ಯಕತೆಯಾಗಿತ್ತು. ನೇತ್ರೆ ಬೇಕೆಂದು ಹೋರಾಡುವ ಜನ, ಬಿಟ್ಟು ಕೊಡೆವೆಂದು ಹಾರಾಡುವ ಜನ. ಈ ಮಧ್ಯೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಪರವೂರಿನಲ್ಲಿ ತಮಗಾಗಬೇಕಾದ ವ್ಯಾವಹಾರಿಕ ಲಾಭಕ್ಕಾಗಿ ನೇತ್ರೆ ಹಾಗೂ ಕುಮಾರನ ಮೇಲೆ ಕಣ್ಣು ಹಾಕಿ ಅದನ್ನು ಇಲ್ಲಿಂದ ಲಪಟಾಯಿಸಲು ಯೋಜನೆ ಹೂಡಿದ ಇಬ್ಬರು ಸ್ವಾರ್ಥಿಗಳು ತೆರೆ ಮೇಲೆ ಬಂದು ತಮ್ಮ ಕುತಂತ್ರವನ್ನು ಹೇಳುತ್ತಾರೆ. ನೇತ್ರೆ ಹಾಗೂ ಕುಮಾರರಿಗೆ ತಮ್ಮ ವಿರುದ್ಧ ಸಂಚು ನಡೆಯುವುದು ಗೊತ್ತಾಗುತ್ತದೆ. ಸಹಸ್ರಾರು ಕೋ.ರೂ. ಹೂಡಿಕೆಯಾಗಿ ಪೈಪುಗಳ ಮೂಲಕ ನೀರು ಹರಿಸಲು ಸಿದ್ಧತೆಯಾಗುತ್ತಿರುವುದು ಗೊತ್ತಾಗುತ್ತದೆ. ಆಗ ಅವರಿಬ್ಬರೂ ಸಂಧಿಸಿ ಈ ವರೆಗೆ ವರ್ಷಕ್ಕೊಂದಾವರ್ತಿಯಾದರೂ ತಮ್ಮ ಸಂಗಮವಾಗುತ್ತಿತ್ತು. ಸಾವಿರಾರು ಮಂದಿ ಇದನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅವರ ಮನೆ ತುಂಬಲು ಇದು ಸಹಕಾರಿಯಾಗುತ್ತಿತ್ತು. ಆದರೆ ಇನ್ನು ಮುಂದೆ ನಮ್ಮ ಸಂಗಮ ಇಲ್ಲ. ಅದು ಬರೀ ಕನಸು, ಬರೀ ನೆನಪು ಎಂದು ಅಗಲುವಿಕೆಯ ತಾಪವನ್ನು, ನೋವನ್ನು, ವಿರಹದ ಬೇಗುದಿಯನ್ನು ಸಾಕ್ಷಾತ್ಕರಿಸುತ್ತಾರೆ. ಅದ್ಭುತ ನಟನೆ. ಈ ಪರಿಕಲ್ಪನೆಯೇ ನಾಟಕದ ಹೈಲೈಟ್‌. ನೇತ್ರೆ ಹಾಗೂ ಕುಮಾರರ ಸಂಗಮ ಇನ್ನಿಲ್ಲ ಎಂದು ಎರಡು ಪಾತ್ರಗಳು ಹೇಳುವ ಮೂಲಕ ಹೊಸ ತಿರುವನ್ನು ಕೊಡುತ್ತವೆ. ಹೀಗೆ ಅವರು ಕುಸಿದು ಬಿದ್ದಾಗ ನೇತ್ರೆ ಚಿನ್ನದೂರು ತಲುಪಿಲ್ಲ ಎನ್ನುವುದು ತಿಳಿಯುತ್ತದೆ. ಕಪಟಿಗಳ ಕಣ್ಣು ಕುಮಾರನ ಮೇಲೆ ಬೀಳುತ್ತದೆ. ಎಂಬಲ್ಲಿಗೆ ತೆರೆ ಬೀಳುತ್ತದೆ. ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿಸುತ್ತದೆ. ಕೇವಲ 30 ನಿಮಿಷಗಳ ನಾಟಕ ಭಾವ ಸ್ಪುರಣಗೊಳಿಸುತ್ತದೆ.

ಅತ್ಯುತ್ತಮ ವಿನ್ಯಾಸದ ಬೆಳಕು, ರಂಗ ಸಜ್ಜಿಕೆ, ರಂಗ ಪರಿಕರಗಳು ನಾಟಕದ ಸೌಂದರ್ಯ ವೃದ್ಧಿಸುತ್ತದೆ. ನಿರ್ದೇಶನ, ಕಥೆ ಎರಡೂ ಪರಿಪೂರ್ಣವಾಗಿ ಮೂಡಿ ಬಂದಿದೆ. ಹೊಸ ಕಲಾವಿದರಾದರೂ ಎಲ್ಲೂ ಅಪಕ್ವತೆ ಇಲ್ಲದ ಪ್ರಬುದ್ಧ ನಟನೆ. ಹಾಡುಗಳು ನಾಟಕದ ಅಂಕಗಳನ್ನು ಹೆಚ್ಚಿಸುತ್ತದೆ. 
ಇದು ನದಿ ತಿರುವಿನ ಕಥೆಯಾ? ಎತ್ತಿನಹೊಳೆ ಯೋಜನೆಗೂ ಇದಕ್ಕೂ ಸಂಬಂಧವಿದೆಯಾ? ನೇತ್ರಾವತಿ ತಿರುವಿನ ಕುರಿತು ಬರವಣಿಗೆ, ಮೆರವಣಿಗೆಯಾಗಿದೆ. ಈ ಪ್ರಯೋಗ ನದಿ ತಿರುವಿನ ಅಗಾಧತೆ ಹಾಗೂ ಕರಾಳ ಮುಖವನ್ನು ತೆರೆದಿಡಲಾ? ಹೀಗೊಂದು ಪ್ರಶ್ನೆ ಬಂದರೆ ಅದಕ್ಕಿದೆ ಉತ್ತರ. ಇನ್ನೊಂದು ಚಿಂತನೆಯೂ ಮಾಡಬಹುದು. ಒಂದೊಮ್ಮೆ ಸಂಭಾಷಣೆಗಳಿಲ್ಲದ್ದರೆ; ಪಿಂಗಾರಪಲ್ಕೆಯ ನೇತ್ರೆ ಎಂಬ ಸುಂದರ ಯುವತಿ. ಆಕೆಗೆ ಕುಮಾರನೆಂಬ ಪ್ರಿಯಕರ. ಈಕೆಯ ಮೇಲೆ ಕಪಟಿಗಳ ಕಣ್ಣು. ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಆಕೆಯನ್ನು ಚಿನ್ನದೂರಿಗೆ ಕದ್ದೊಯ್ಯುವ ಕಾರಸ್ಥಾನ. ವಿಷಯ ತಿಳಿದು ಇಬ್ಬರು ಪ್ರೇಮಿಗಳ ರೋದನ. ಚಿನ್ನದೂರಿಗೆ ಹೋದ ನೇತ್ರೆ ಬೇಗುದಿಯಲ್ಲಿದ್ದು ಮನೆಬಿಟ್ಟು ಹೊರಬರದ ಕಾರಣ ಸ್ವಾರ್ಥ ಈಡೇರಿಕೆಯಾಗದೇ ಕುಮಾರನ ಮೇಲೆ ಕಣ್ಣು ಹಾಕುವ ಕಪಟಿಗಳು. ಹೀಗೂ ಅರ್ಥೈಸಿಕೊಳ್ಳಬಹುದು. 

ಅಂತೂ ಸಮಾಜದ ತಲ್ಲಣಗಳಿಗೆ ಧ್ವನಿಯಾದ, ಬೆಳಕಾದ ಸನ್ನಿವೇಶ ಇದು. ಜನಾರ್ದನ ಕಾನರ್ಪ, ಧೀರಜ್‌ ಉಜಿರೆ, ವಿನಯ್‌ಕುಮಾರ್‌ ಉಜಿರೆ, ಸುಜಿತ್‌ ಎಸ್‌. ಕುಂಜರ್ಪ, ಅನನ್ಯ ಬೆಳ್ತಂಗಡಿ, ಅಕ್ಷಯ ಗೌಡ ಕುಡೆಕಲ್ಲು, ಕಿರಣ್‌ ಕೆ. ನಿಟ್ಟಡೆ, ರಾಘವೇಂದ್ರ ಬಂಗಾಡಿ, ಸುದಿತ್‌, ದಿಶಾಂತ್‌ ಶೆಟ್ಟಿ ಮುಂಡಾಜೆ, ವಿನಿಶಾ ಉಜಿರೆ, ಹೇಮಂತ್‌ ನಾಯಕ್‌, ಸಮರ್ಥನ್‌ ಎಸ್‌.ರಾವ್‌, ಶಿವಶಂಕರ್‌ ಗೇರುಕಟ್ಟೆ, ಹೇಮಚಂದ್ರ ಅರುವ, ಸತೀಶ್‌ ಕಕ್ಯಪದವು, ವಿಶಾಕ್‌ ಆಚಾರ್ಯ ರಂಗದ ಹಿನ್ನೆಲೆ ಮುನ್ನೆಲೆಯಲ್ಲಿದ್ದರೆ, ರಂಗಸಜ್ಜಿಕೆ ಬೆಳಕು ಯಶವಂತ್‌ ಬೆಳ್ತಂಗಡಿ ಅವರದ್ದು. ನಿರ್ಮಾಣ, ನಿರ್ವಹಣೆ ರಮಾನಂದ ಸಾಲಿಯಾನ್‌ ಮುಂಡೂರು. 

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next