ಮುಂಬಯಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಅಧಿಕಾರವನ್ನು ಮರಳಿ ಪಡೆದಿರುವುದಕ್ಕೆ ಭಾರತದಲ್ಲಿರುವ ಕೆಲವು ಮುಸ್ಲಿಮರು ಸಂಭ್ರಮ ವ್ಯಕ್ತಪಡಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಷಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್ ಸಂಗ್ ನ ಎ52ಎಸ್ 5ಜಿ ಸ್ಮಾರ್ಟ್ ಫೋನ್.! ಇಲ್ಲಿದೆ ಮಾಹಿತಿ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮರಳಿ ಅಧಿಕಾರಕ್ಕೆ ಬಂದಿರುವ ಬಗ್ಗೆ ಇಡೀ ಜಗತ್ತೇ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ ಭಾರತದಲ್ಲಿರುವ ಕೆಲವು ಮುಸ್ಲಿಮರ ಅನಾಗರಿಕ ಸಂಭ್ರಮಾಚರಣೆ ಕಡಿಮೆ ಅಪಾಯಕಾರಿಯದ್ದಲ್ಲ ಎಂದು ಷಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರ ನಡೆಸುತ್ತಿರುವುದನ್ನು ಸಂಭ್ರಮಿಸುತ್ತಿರುವವರು ಒಂದು ವೇಳೆ ತಮ್ಮ ಧರ್ಮದ ಪುನರುಜ್ಜೀವನ ಸುಧಾರಿಸಲೋ ಅಥವಾ ಅದೇ ಹಳೆಯ ಅನಾಗರಿಕತೆಯೊಂದಿಗೆ ಬದುಕಲು ಬಯಸುತ್ತಾರೆಯೋ ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ನಟ ಷಾ (71) ತೀಕ್ಷ್ಣವಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹಿಂದುಸ್ತಾನಿ ಇಸ್ಲಾಮ್ ಎಂದು ಕರೆಯುವ ಹಾಗೂ ಪ್ರಪಂಚದ ಇತರ ಭಾಗಗಳಲ್ಲಿ ಆಚರಣೆಯಲ್ಲಿ ವ್ಯತ್ಯಾಸ ಇರುವುದಾಗಿ ನಾಸಿರುದ್ದೀನ್ ಷಾ ತಿಳಿಸಿದ್ದು, ಭಾರತದಲ್ಲಿರುವ ಇಸ್ಲಾಂ ಯಾವಾಗಲೂ ಪ್ರಪಂಚದಾದ್ಯಂತ ಇರುವ ಇಸ್ಲಾಂ ಧರ್ಮಕ್ಕಿಂತ ಭಿನ್ನವಾದದ್ದು ಎಂದು ಹೇಳಿದರು.
ಆಗಸ್ಟ್ 15ರಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅಫ್ಘಾನ್ ಬಿಟ್ಟು ಪರಾರಿಯಾಗಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ವಾಪಸ್ ತೆರಳುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ತಾಲಿಬಾನ್ ಉಗ್ರರು ಕಾರ್ಯಪ್ರವೃತ್ತರಾಗುವ ಮೂಲಕ ಅಫ್ಘಾನ್ ಅಧಿಕಾರ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.