Advertisement

“ಚಂದ್ರ ಧೂಳು’ಖರೀದಿಗೆ ನಾಸಾ ಸಹಿ

07:41 AM Dec 05, 2020 | mahesh |

ನ್ಯೂಯಾರ್ಕ್‌: ಜಗತ್ತಿನ 4 ಬಾಹ್ಯಾಕಾಶ ಸಂಸ್ಥೆಗಳಿಂದ ಚಂದ್ರನ ಮೇಲ್ಪದರದ ಧೂಳನ್ನು 18.43 ಲಕ್ಷ ರೂ.ಗಳಿಗೆ ಖರೀದಿಸಲು ಅಮೆರಿಕದ ನಾಸಾ ಮುಂದಾಗಿದೆ. ಕೊಲೊರಾಡೋದ ಲೂನಾರ್‌ ಔಟ್‌ಪೋಸ್ಟ್‌ ಆಫ್ ಗೋಲ್ಡನ್‌, ಟೋಕಿಯೊದ ಐಸ್ಪೇಸ್‌ ಜಪಾನ್‌, ಲಕ್ಸಂಬರ್ಗ್‌ನ ಐಸ್ಪೇಸ್‌ ಯುರೋಪ್‌ ಹಾಗೂ ಕ್ಯಾಲಿಫೊರ್ನಿಯಾದ ಮಾಸ್ಟೆನ್‌ ಸ್ಪೇಸ್‌ ಸಿಸ್ಟಮ್ಸ್‌ ಆಫ್ ಮೊಜೇವ್‌- ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ನಾಸಾ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿದೆ.

Advertisement

ಈ ನಾಲ್ಕು ಖಾಸಗಿ ಸಂಸ್ಥೆಗಳು 2022 ಮತ್ತು 2023ರಲ್ಲಿ ಚಂದ್ರನ ಅಂಗಳದಲ್ಲಿ ಮಾನವರಹಿತ ಬಾಹ್ಯಾಕಾಶ ನೌಕೆಗಳನ್ನು ಇಳಿಸಿ, ಮೇಲ್ಪದರ ಮಣ್ಣಿನ ಮಾದರಿ ಕಲೆ ಹಾಕಲಿವೆ. ನಾಸಾಕ್ಕೆ ಕಡಿಮೆ ಖರ್ಚಿನಲ್ಲಿ ಚಂದ್ರನ ಮಣ್ಣು ದಕ್ಕಲಿದ್ದು, ಇದನ್ನು “ಆರ್ಟೆಮಿಸ್‌ ಪ್ರೋಗ್ರಾಮ್‌’ಗೆ ಬಳಸಿಕೊಳ್ಳಲು ನಿರ್ಧರಿಸಿದೆ. 2024ರಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆಯನ್ನು ಚಂದ್ರನಲ್ಲಿಗೆ ಕಳಿಸುವ ಯೋಜನೆಯಲ್ಲಿರುವ ನಾಸಾ, “ಆರ್ಟೆಮಿಸ್‌ ಪ್ರೋಗ್ರಾಮ್‌’ ಅಡಿಯಲ್ಲಿ ಲೂನಾರ್‌ನ ವಾತಾವರಣದ ಅಧ್ಯಯನ ನಡೆಸುತ್ತಿದೆ.

ಬಾಹ್ಯಾಕಾಶದಲ್ಲೂ ಮೂಲಂಗಿ!
ಭೂಮಿ ಮೇಲಷ್ಟೇ ಅಲ್ಲ, ಬಾಹ್ಯಾಕಾಶದಲ್ಲೂ ಮೂಲಂಗಿ ಬೆಳೆಯುತ್ತೆ! ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್‌) ಮೂಲಂಗಿ ಬೆಳೆಯುವ ಮೂಲಕ ನಾಸಾ ಗಗನಯಾತ್ರಿಗಳು ಚರಿತ್ರೆ ನಿರ್ಮಿಸಿದ್ದಾರೆ. ಐಎಸ್‌ಎಸ್‌ನ ಸೂಕ್ಷ್ಮ ಗುರುತ್ವ ಚೇಂಬರ್‌ನಲ್ಲಿ ಗಗನಯಾತ್ರಿ ಕೇಟ್‌ ರುಬಿನ್ಸ್‌ ಅತ್ಯಾಧುನಿಕ ಕೃಷಿ ವಿಧಾನ ಅನುಸರಿಸಿ, ನವೆಂಬರ್‌ ತಿಂಗಳಿನಲ್ಲಿ 20 ಮೂಲಂಗಿ ಗಿಡಗಳನ್ನು ನೆಟ್ಟಿದ್ದರು. ಅವುಗಳಿಗೀಗ ಕಟಾವಿಗೆ ಸಿದ್ಧವಾಗಿದ್ದು, ಗಿಡಗಳ ಚಿತ್ರಗಳನ್ನು ಐಎಸ್‌ಎಸ್‌ ಸಂಶೋಧಕರ ತಂಡ ಟ್ವಿಟರಿನಲ್ಲಿ ಹಂಚಿಕೊಂಡಿದೆ. ಸೂಕ್ಷ್ಮಗುರುತ್ವದಲ್ಲಿ ಬೆಳೆದ ಮೂಲಂಗಿಗಳು ಶೀಘ್ರವೇ ಭೂಮಿ ತಲುಪಲಿದ್ದು, ತಜ್ಞರು ಪೌಷ್ಟಿಕ ಪರೀಕ್ಷೆ ನಡೆಸಲಿದ್ದಾರೆ. ಈ ಫ‌ಲಿತಾಂಶದ ಅನಂತರವಷ್ಟೇ ಐಎಸ್‌ಎಸ್‌ನಲ್ಲಿ ಬೆಳೆಯುವ ಮೂಲಂಗಿಯನ್ನು ಗಗನಯಾತ್ರಿಗಳಿಗೆ ಆಹಾರವಾಗಿ ಬಳಸಲು ನಾಸಾ ನಿರ್ಧರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next