ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದ ಸಂತೆಯಲ್ಲಿ ಕರ ವಸೂಲಿ ಮಾಡುವ ನಿಟ್ಟಿನಲ್ಲಿ ಉಂಟಾದ ಎರಡು ಗುಂಪಿನ ಮಧ್ಯದ ಜಗಳ ಪೊಲೀಸರ ಮೇಲಿನ ಹಲ್ಲೆಯಾಗಿ ಪರಿವರ್ತನೆಯಾಗಿ ಒಟ್ಟು 28 ಜನರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿವೆ. ಫಕೀರಪ್ಪ, ರೇವಣಸಿದ್ಧಪ್ಪ ಮತ್ತು ಆನಂದ ಮೇತ್ರೆ ಎನ್ನುವರಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ನರೋಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಪಂ ಚುನಾವಣೆಯಲ್ಲಿನ ಅಧ್ಯಕ್ಷ ಸ್ಥಾನ ಪಡೆಯಲು ಎರಡು ಗುಂಪಿನ ಮಧ್ಯೆ ಗುದ್ದಾಟ ನಡೆದಿತ್ತು. ಗುರುವಾರ ಕರ ವಸೂಲಿ ವೇಳೆ ಈ ಗುದ್ದಾಟ ಪುನಃ ಭುಗಿಲೆದ್ದಿತ್ತು. ಶುಕ್ರವಾರ ಬೆಳಗ್ಗೆ ಸಂತೆಯಲ್ಲಿ ಜಗಳ ನಡೆದಿದೆ ಎಂದಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡು ಗುಂಪಿನ ಜನರನ್ನು ಸಂತೈಸಿ ಕಳಿಸಿದ್ದರು. ಪೊಲೀಸರು ಜಗಳ ಬಗೆಹರಿಸಿ ಠಾಣೆಗೆ ಬಂದು ಸೇರುತ್ತಿರುವಾಗಲೇ ಎರಡು ಗುಂಪಿನ 30ರಿಂದ 40 ಜನ ಠಾಣೆಯ ಗೇಟ್ ಬಳಿ ಬಂದು ಜಗಳ ಆಡಿದರು. ಮಧ್ಯ ಬಂದ ಪೊಲೀಸರ ಮೇಲೆ ಕಲ್ಲು ತೂರಿದರು. ಬಡಿಗೆಯಿಂದ ಹೊಡೆದರು. ಇದರಿಂದ ಮೂವರಿಗೆ ಗಾಯಗಳಾಗಿವೆ ಎಂದು ತಿಳಿದಿದೆ.
28 ಜನರ ವಿರುದ್ಧ ಪ್ರಕರಣ
ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪಿನ ಒಟ್ಟು 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಯಲ್ಲಾಲಿಂಗ ಯಳಸಂಗಿ, ರಾಜಕುಮಾರ ರಾಗಿ, ಮಲ್ಲಿಕಾರ್ಜುನ ಕರಕೂನ್, ಕೈಲಾಸ ದುಕೇನ್, ಸಾಗರ ಹಾದಿಮನಿ, ಕೆಲಾಸ್ ರಾಗಿ, ಲಕ್ಷ್ಮಿಪುತ್ರ ಯಳಸಂಗಿ, ಕ್ಷೇಮಲಿಂಗ ಯಳಸಂಗಿ, ಮಾಣಿಕಪ್ಪ ಬೋಧನ, ಚಂದ್ರಕಾಂತ ದುಕೇನ್, ಪರುಶರಾಮ್ ರಾಗಿ, ಮಿಥುನ್ ರಾಗಿ, ಸಚಿನ್ ಹತ್ತರಕಿ, ಪ್ರಾಣೇಶ ದುಕೇದ್, ಶ್ರೀನಾಥ ಚಿಚಕೋಟಿ, ರಾಜಕುಮಾರ ಕಡ್ಡಿ, ಕ್ಷೇಮಲಿಂಗ ನಿಲೂರ, ಚನ್ನವೀರ ಬೋಧನ್, ಪ್ರಶಾಂತ ನಾಟೀಕಾರ, ರವಿಕುಮಾರ ಜಮಾದಾರ, ಸಂತೋಷ ಜಮಾದಾರ, ಸಿದ್ದರಾಜ್ ಯಳಸಂಗಿ, ಮನೋಹರ ಕೋಠಾರಿ, ಈರಣ್ಣ ಸುಂಟನೂರು, ಮಹಾದೇವ ಸಾವಳಗಿ, ಚಂದ್ರಕಾಂತ ಹಾದಿಮನಿ, ಕ್ಷೇಮಲಿಂಗ್ ಅರ್ಜುನ ದುಕೇದ್ ಮತ್ತು ಗಣೇಶ ಅಪ್ಪಾರಾವ್ ವಿರುದ್ಧ ಪ್ರಕರಣ ದಾಲಾಗಿದೆ ಎಂದು ಪಿಎಸ್‌ಐ ವಾತ್ಸಲ್ಯ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆ ಸಂಬಂಧಿಸಿದಂತೆ ಇನ್ನೂ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.