Advertisement

ನರಿಮೊಗರು ಸಾಂದೀಪನಿ ವಿಹಾರ: ಶ್ರೀಕೃಷ್ಣ ಲೀಲೋತ್ಸವ 

11:19 AM Sep 06, 2018 | |

ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣ ಲೀಲೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಕೃಷ್ಣ ರಾಧಾ ವೇಷಧಾರಿ ಪುಟಾಣಿಗಳ ಕಲರವ, ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕರಿಗೆ ಏರ್ಪಡಿಸಲಾದ ವಿವಿಧ ಕ್ರೀಡಾಕೂಟಗಳು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಮೆರುಗು ಪಡೆಯಿತು. ಕಾರ್ಯಕ್ರಮವನ್ನು ಪುತ್ತೂರು ಡಿಸಿಆರ್‌ ನಿರ್ದೇಶಕ ಡಾ| ಎಂ.ಗಂಗಾಧರ ನಾಯಕ್‌ ಉದ್ಘಾಟಿಸಿ ಮಾತನಾಡಿ, ಧರ್ಮ ಸಂಸ್ಥಾಪಕ ಶ್ರೀಕೃಷ್ಣನ ಜೀವನ ಎಂದಿಗೂ ಪ್ರಸ್ತುತ ಎಂದರು.

Advertisement

ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನ ನಿರ್ದೇಶಕಿ ಎಂ.ವತ್ಸಲಾ ಮಾತನಾಡಿ, ಮಕ್ಕಳಿಗೆ ವಿನಯ, ವಿವೇಕ, ಸಂಸ್ಕಾರವನ್ನು ಕಲಿಸುವ ಕೆಲಸ ಸಾಂದೀಪನಿ ವಿದ್ಯಾಸಂಸ್ಥೆಗಳಿಂದ ಆಗುತ್ತಿದೆ ಎಂದರು. ನಿಡ್ಪಳ್ಳಿ  ಗ್ರಾಮ ಪಂಚಾಯತ್‌ನ ಸದಸ್ಯ ಬಾಲಚಂದ್ರ ರೈ ಆನಾಜೆ ಮಾತನಾಡಿ, ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧರ್ಮವನ್ನು ಬಿಟ್ಟುಕೊಡಬಾರದು. ಶ್ರೀಕೃಷ್ಣನ ಜೀವನವೇ ಎಲ್ಲರಿಗೂ ಆದರ್ಶ ಎಂದರು. ಉದ್ಯಮಿ ರವಿ ತಿಪ್ಪಣ್ಣ ಶೆಟ್ಟಿ ಮೂಡಗಿ ಅರಿಹಂತ ಶುಭ ಹಾರೈಸಿದರು.

ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸೂರ್ಯಪ್ರಸನ್ನ ರೈ ತಿಂಗಳಾಡಿ, ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣ ಪ್ರಸಾದ್‌ ಕೆದಿಲಾಯ,ಸದಸ್ಯರಾದ ಹರೀಶ್‌ ಪುತ್ತೂರಾಯ, ಪ್ರಸನ್ನ ಎನ್‌. ಭಟ್‌ ಉಪಸ್ಥಿತರಿದ್ದರು.

ಬಹುಮಾನ ವಿತರಣೆ
ಶೈಕ್ಷಣಿಕ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ತಾ| ಮಟ್ಟದ ಪ್ರತಿಭಾ ಕಾರಂಜಿ, ಜಿಲ್ಲಾ ಮಟ್ಟದ ಕರಾಟೆ ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದ ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಸಂಚಾಲಕ ಭಾಸ್ಕರ ಆಚಾರ್‌ ಹಿಂದಾರ್‌ ಸ್ವಾಗತಿಸಿ, ಮುಖ್ಯಶಿಕ್ಷಕಿ ಜಯಮಾಲಾ ವಿ.ಎನ್‌. ಪ್ರಸ್ತಾವಿಸಿದರು. ಶಿಕ್ಷಕಿ ಉಷಾ ವಂದಿಸಿದರು. ಶಿಕ್ಷಕ ರವಿಶಂಕರ್‌ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಮೆರವಣಿಗೆ 
ಉದ್ಘಾಟನಾ ಕಾರ್ಯಕ್ರಮದ ಬಳಿಕ ಶ್ರೀಕೃಷ್ಣನ ವಿಗ್ರಹದ ಮೆರವಣಿಗೆ ನಡೆಯಿತು. ಶಾಲಾ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಶಾಲಾ ಹಿಂಬದಿಯ ಕ್ರೀಡಾಂಗಣಕ್ಕೆ ತೆರಳಿ ಅಲ್ಲಿಂದ ವಾಪಾಸು ಶಾಲಾ ಮುಂಭಾಗಕ್ಕೆ ಆಗಮಿಸಿತು. ಹುಲಿ ವೇಷ, ಘೋಷ್‌ ತಂಡ, ಕೀಲು ಕುದುರೆ, ಬಣ್ಣದ ಕೊಡೆಗಳು, ವಿದ್ಯಾರ್ಥಿಗಳ ಭಜನೆ ಮೆರವಣಿಗೆಗೆ ಮೆರುಗು ನೀಡಿತು. ಅತಿಥಿಗಳು, ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕ ವೃಂದ, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next