Advertisement

ವ್ಯಾಪಾರ ವಹಿವಾಟಿನಲ್ಲಿ ಮೈಮರೆತ ಮಕ್ಕಳು!

11:49 AM Dec 09, 2018 | |

ನರಿಮೊಗರು: ಪುತ್ತೂರು ತಾಲೂಕಿನ ನರಿಮೊಗರು ಸ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಠಾರ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿತ್ತು. ಇದಕ್ಕೆ ವೇದಿಕೆ ನಿರ್ಮಿಸಿದ್ದು ಮಾತ್ರ ಮೆಟ್ರಿಕ್‌ ಮೇಳ. ಓದು, ಬರಹ ಎನ್ನುತ್ತಿದ್ದ ಮಕ್ಕಳು ಅಪ್ಪಟ ವ್ಯಾಪಾರಿಗಳಾಗಿ ಬಿಟ್ಟಿದ್ದರು. ವ್ಯಾಪಾರ ವಹಿವಾಟಿನಲ್ಲಿ ಮಕ್ಕಳು ಮೈಮರೆತು ಹೋಗಿದ್ದರು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ವಿವಿಧ ಬಗೆಯ ತಾಜಾ ತರಕಾರಿ, ಸೊಪ್ಪುಗಳು, ಹೂವು, ಹಣ್ಣು-ಹಂಪಲು, ಗಿಡಗಳು ಹಾಗೂ ಕರಕುಶಲ ವಸ್ತುಗಳನ್ನು ಶಾಲಾ ಆವರಣದಲ್ಲಿ ವ್ಯಾಪಾರಕ್ಕೆ ಇಟ್ಟು ಹಣ ಗಳಿಸಿಕೊಂಡರು.

Advertisement

ಸಂತೆಯಲ್ಲಿ ಏನೇನಿತ್ತು?
ಶಾಲಾ ವಿದ್ಯಾರ್ಥಿಗಳಿಗೆ ಮೇಳದಲ್ಲಿ ಭಾಗವಹಿಸುವ ಅವಕಾಶವಿತ್ತು. ಚೀನಿ ಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಬದನೆ, ಕುಂಬಳಕಾಯಿ, ಪಡುವಲಕಾಯಿ, ಬಾಳೆಹಣ್ಣು, ಹರಿವೆ ಸೊಪ್ಪು, ಹಸಿಮೆಣಸು, ಟೊಮೇಟೊ, ಸಿಹಿಗೆಣಸು, ಬಸಳೆ, ಎಳನೀರು, ಕೊಕ್ಕೊ, ವೀಳ್ಯದೆಲೆ, ತೆಂಗಿನ ಕಾಯಿ, ಕಬ್ಬು, ಸೀಬೆಕಾಯಿ, ಪರಂಗಿ ಹಣ್ಣು, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧೀಯ ಸಸ್ಯ, ಹೂವಿನ ಗಿಡ, ಗುಲಾಬಿ, ಮಲ್ಲಿಗೆ, ಅರಸಿನ, ನಿಂಬೆ ಮೊದಲಾದ ಹೂವು, ಹಣ್ಣು ಹಾಗೂ ತರಕಾರಿ ಗಿಡಗಳು, ಹೂವು, ಚರುಂಬುರಿ ಮುಂತಾದವು ಸಂತೆಯಲ್ಲಿ ಲಭ್ಯವಿದ್ದವು.

ಯಶಸ್ವಿ ಕಾರ್ಯಕ್ರಮ
ಶಿಕ್ಷಣದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸರಕಾರದ ಸುತ್ತೋಲೆಯಂತೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವ್ಯಾಪಾರ ಮನೋಭಾವ, ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಯಪಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿರುವ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನರಿಮೊಗರು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಭಾಶ್ಚಂದ್ರ ಶೆಣೈ, ಅಧ್ಯಕ್ಷ ಗಂಗಾಧರ ಸುವರ್ಣ, ಕಾರ್ಯದರ್ಶಿ ಶರತ್‌ಚಂದ್ರ ಬೈಪಾಡಿತ್ತಾಯ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ವೇದನಾಥ ಸುವರ್ಣ, ಕಾರ್ಯದರ್ಶಿ ಪ್ರವೀಣ್‌ ಸೇರಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣರಾಜ ಡಿ., ಉಪಾಧ್ಯಕ್ಷೆ ಲಕ್ಷ್ಮೀ, ಮಾಜಿ ಅಧ್ಯಕ್ಷ ಉಸ್ಮಾನ್‌ ನೆಕ್ಕಿಲು, ಗ್ರಾ.ಪಂ. ಸದಸ್ಯ ಜಯರಾಮ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಮತ್ತಿತರರು ಇದ್ದರು. ಶಾಲಾ ಮುಖ್ಯಶಿಕ್ಷಕ ವಿಜಯ ನಾಯ್ಕ ಸ್ವಾಗತಿಸಿ, ವಂದಿಸಿದರು.

ಶಿಕ್ಷಕರು, ಹೆತ್ತವರೇ ಗ್ರಾಹಕರು 
ಮೆಟ್ರಿಕ್‌ ಮೇಳದಲ್ಲಿ ಗ್ರಾಹಕರು ಚೌಕಾಸಿ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು. ಕೆಲವೊಂದು ಗ್ರಾಹಕರು ಮಾತುಕತೆಗೆ ಇಳಿಯದೆ ವಿದ್ಯಾರ್ಥಿಗಳು ನಿಗದಿಪಡಿಸಿದ ದರ ಕೊಟ್ಟು ಖರೀದಿಸುತ್ತಿದ್ದರು. ಒಟ್ಟಿನಲ್ಲಿ ವಿದ್ಯಾರ್ಥಿಗಳು ತಾವು ತಂದಿರುವ ವಸ್ತುಗಳನ್ನು ಮಾರಾಟ ಮಾಡಿದರು. ಇಲ್ಲಿ ಶಿಕ್ಷಕರು, ಪೋಷಕರು ಹಾಗೂ ಕೆಲ ಸಾರ್ವಜನಿಕರು ಗ್ರಾಹಕರಾಗಿದ್ದು, ತರಕಾರಿಗಳನ್ನು ಕೊಂಡೊಯ್ದರು.

Advertisement

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next