Advertisement

ನರಿಮೊಗರು: ಸಾಂದೀಪನಿಯಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ

06:38 AM Jan 06, 2019 | |

ನರಿಮೊಗರು : ಮಕ್ಕಳು ದೇಶದ ಸಂಪತ್ತು. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಕನಸು ಕಾಣಬೇಕು ಮತ್ತು ಅದನ್ನು ನನಸು ಮಾಡಲು ಪಣತೊಡಬೇಕು ಎಂದು ರೀಜನಲ್‌ ಪಿ.ಆರ್‌.ಒ.ಡಿ.ಅರ್‌.ಡಿ.ಒ. (ದಕ್ಷಿಣ) ಕೆ. ಜಯಪ್ರಕಾಶ್‌ ಆರ್‌. ರಾವ್‌ ಹೇಳಿದರು.

Advertisement

ಅವರು ಶುಕ್ರವಾರ ರಾತ್ರಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಹೊನಲು ಬೆಳಕಿನ ಕ್ರೀಡೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕವಾಗಿ, ರಾಜಕೀಯವಾಗಿ ನಮ್ಮ ದೇಶ ಮುಂದಿದ್ದರೂ ತಂತ್ರಜ್ಞಾನ, ರಕ್ಷಣಾ ಸಾಮಗ್ರಿ, ನಾಗರಿಕ ಸೌಲಭ್ಯಗಳ ಉತ್ಪಾದನೆ ಯಲ್ಲಿ ಇನ್ನೂ ಮುಂದೆ ಬಾರದಿರುವುದು ಬೇಸರದ ಸಂಗತಿ. ಡಾ| ಅಬ್ದುಲ್‌ ಕಲಾಂ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೆಲಿದೆ ಎಂದರು.

ಪುತ್ತೂರಿನ ವೈದ್ಯ ಡಾ| ಸುರೇಶ್‌ ಪುತ್ತೂರಾಯ ಮಾತನಾಡಿ, ನರಿಮೊಗರಿನ ಹೆಸರನ್ನು ಹತ್ತೂರಿಗೆ ಪಸರಿಸುವ ಕೆಲಸವನ್ನು ಸಾಂದೀಪನಿ ಶಾಲಾ ವಿದ್ಯಾ ಸಂಸ್ಥೆ ಮಾಡಿದೆ. ಹೆತ್ತವರು ಮಕ್ಕಳ ಜೊತೆ ಹೆಚ್ಚು ಕಾಲ ಕಳೆದು ಮನೆಯ ಶಿಕ್ಷಣದಿಂದ ವಂಚಿತರಾಗದಂತೆ ಮಾಡಬೇಕು ಎಂದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಶ್ರೀಕೃಷ್ಣ ಎ.ಎಸ್‌., ಪುತ್ತೂರು ಕ್ಯಾಂಪ್ಕೋ ಉದ್ಯೋಗ ಸ್ಥರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ರವೀಂದ್ರ ಆನ, ಹಾಸನದ ಪ್ರಗತಿಪರ ಕೃಷಿಕ ಡಿ.ಸಿ. ಅಣ್ಣಪ್ಪ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸೂರ್ಯಪ್ರಸನ್ನ ರೈ ತಿಂಗಳಾಡಿ ಮಾತನಾಡಿದರು. ಸಾಂದೀಪನಿ ಶಾಲಾ ಸ್ಥಾಪಕಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಎಚ್. ಭಾಸ್ಕರ ಆಚಾರ್‌ ಹಿಂದಾರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ.ಎನ್‌. ವರದಿ ಮಂಡಿಸಿದರು.

ಅಭಿನಂದನೆ
ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ನೀಡಿ ಸಹಕರಿಸುತ್ತಿರುವ ಜಯರಾಮ ಕೆದಿಲಾಯ ಶಿಬರ, ಭಾಸ್ಕರ ಆಚಾರ್‌ ಹಿಂದಾರು, ಪ್ರಸನ್ನ ಭಟ್ ಬಲ್ನಾಡು ಹಾಗೂ ವಿಕಾಸ್‌ ಪುತ್ತೂರು ಅವರಿಗೆ ಮುಖ್ಯೋಪಾಧ್ಯಾಯಿನಿ ಜಯ ಮಾಲಾ ಅಭಿನಂದನೆ ಸಲ್ಲಿಸಿದರು. ಜ. 4ರಂದು ಹುಟ್ಟು ಹಬ್ಬವನ್ನು ಆಚರಿಸಿದ ಸಂಸ್ಥೆಯ ಐವರು ವಿದ್ಯಾರ್ಥಿಗಳಿಗೆ ಜಯರಾಮ ಕೆದಿಲಾಯ ಅವರು ಬಹುಮಾನ ನೀಡಿ ಶುಭ ಹಾರೈಸಿದರು.

Advertisement

ಗೌರವಾರ್ಪಣೆ
ಕಳೆದ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕಿ ನೀತು ನಾಯಕ್‌ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ರಾಷ್ಟ್ರ ಮಟ್ಟದ ಕ್ರೀಡಾಪಟು ಹಿತಾಶ್ರೀ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಹಿರಣ್ಯ ಗಣಪತಿ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಡಳಿತ ಮಂಡಳಿ ಸದಸ್ಯ ರಾದ ಹರೀಶ್‌ ಪುತ್ತೂರಾಯ, ಪ್ರಸನ್ನ ಎನ್‌. ಭಟ್ ಬಲ್ನಾಡು, ಶಾಲಾ ನಾಯಕ ಅನಿರುದ್ಧ ಎಸ್‌.ಪಿ., ಕಚೇರಿ ಮುಖ್ಯಸ್ಥ ಶಿವಕುಮಾರ್‌, ಶಿಕ್ಷಕ ಪ್ರಸಾದ್‌ ಅತಿಥಿಗಳನ್ನು ಗೌರವಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣಪ್ರಸಾದ್‌ ಶಿಬರ ವಂದಿಸಿದರು. ಶಿಕ್ಷಕ ರವಿಶಂಕರ್‌ ಮತ್ತು ಶಿಕ್ಷಕಿ ಸೌಮ್ಯಾ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಸಾಹಸ ಪ್ರದರ್ಶನ ಜರಗಿತು.

ಸಾಹಸ ಕ್ರೀಡೆಗಳ ಅನಾವರಣ
ವಾರ್ಷಿಕೋತ್ಸವದ ಅಂಗವಾಗಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಮಕ್ಕಳು ಶುಕ್ರವಾರ ಸಂಜೆ ಮೈ ನವಿರೇಳಿಸುವ ಸಾಹಸಗಳನ್ನು ಪ್ರದರ್ಶಿಸಿದರು.ಪ್ರೇಕ್ಷಕರ ಕರತಾಡನದ ನಡುವೆ ಬೆಂಕಿಯೊಂದಿಗೆ ಸರಸವಾಡಿದ್ದು ಮೈ ಝಲ್ಲೆನಿಸಿತು. ಶಿಶು ಮಂದಿರದ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು. “ಮುದ್ರಿಕಾ ಪ್ರದಾನ’ ಯಕ್ಷಗಾನ ಪ್ರದರ್ಶನದ ಬಳಿಕ ವಿದ್ಯಾರ್ಥಿಗಳ ಸಾಹಸ ಪ್ರದರ್ಶನ ಆರಂಭವಾಯಿತು.ಪಿರಮಿಡ್‌ ನಿರ್ಮಾಣ, ತಾಲೀಮು ಪ್ರದರ್ಶನ, ಬೆಂಕಿಯ ಬಳೆಗಳ ನಡುವೆ ಚೆಲ್ಲಾಟ, ಸೈಕಲ್‌ ಸಾಹಸ, ಕೂಪಿಕಾ ಸಮತೋಲನ, ಮಲ್ಲಕಂಬ ಪ್ರದರ್ಶನ, ಮಲ್ಲಕಂಬದಲ್ಲಿ ಯೋಗ, ದೊಂದಿ ವಿದ್ಯೆ, ಸಮೂಹ ನೃತ್ಯರೂಪಕ, ಕೋಲಾಟ, ಕರಾಟೆ, ದೀಪಾರತಿ ಮೊದಲಾದ ಪ್ರದರ್ಶನಗಳು ಕ್ರೀಡೋತ್ಸವದ ಮೆರುಗು ಹೆಚ್ಚಿಸಿದವು. ಐಕ್ಯಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.ಆಡಳಿತ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ, ಸಂಚಾಲಕ ಭಾಸ್ಕರ್‌ ಆಚಾರ್‌ ಹಿಂದಾರು, ಮುಖ್ಯ ಶಿಕ್ಷಕಿ ಜಯಮಾಲಾ ವಿ.ಎನ್‌. ಹಾಗೂ ಶಿಕ್ಷಕ ತಂಡ ಮಾರ್ಗದರ್ಶನ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next