Advertisement
ಯೋಜನೆ ವ್ಯಾಪ್ತಿಯಲ್ಲಿನ ಗ್ರಾಮ ಮತ್ತು ಜನವಸತಿ ಪ್ರದೇಶಗಳು ಪ್ರಸ್ತುತ ಕುಡಿಯುವ ನೀರಿನ ಬರವನ್ನು ಎದುರಿಸದಿದ್ದರೂ ಬೇಸಗೆಯ ಕೊನೆ ಹಂತದಲ್ಲಿ ಸಮಸ್ಯೆಗೆ ಈಡಾಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯೋಜನೆ ಪೂರ್ಣ ಅನುಷ್ಠಾನ ಆದಾಗ ಸಮಸ್ಯೆಗೆ ಸಮಗ್ರ ಪರಿಹಾರ ದೊರಕೀತು ಎನ್ನುವ ಆಶಾವಾದವಿದೆ.
ಪ್ರಸ್ತುತ ಹಂತದಲ್ಲಿ ನದಿ ನೀರನ್ನು ಹೊರತುಪಡಿಸಿದ ವ್ಯಾಪ್ತಿಯಲ್ಲಿ ಅಂತರ್ಜಲವೇ ಕುಡಿಯುವ ಮತ್ತು ಕೃಷಿ ಉದ್ದೇಶದ ಬಳಕೆಗೆ ಉಪಯೋಗ ಆಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ನಿರಂತರ ನೀರಿನ ಹರಿವು ಇರುವುದು ನೇತ್ರಾವತಿ ಯಲ್ಲಿ ಮಾತ್ರ. ಫಲ್ಗುಣಿಯಲ್ಲಿ ಫೆಬ್ರವರಿ, ಮಾರ್ಚ್ ಅನಂತರ ನೀರಿನ ಹರಿವು ಸಂಪೂರ್ಣ ನಿಲುಗಡೆ ಆಗುವುದರಿಂದ ಪರ್ಯಾಯವಾಗಿ ಗ್ರಾಮಾಂತರ ಪ್ರದೇಶಕ್ಕೆ ಸಮಗ್ರ ವ್ಯವಸ್ಥೆಗಳಿಲ್ಲ ಪ್ರಸ್ತುತ ವರ್ಷಕ್ಕೆ ನೇತ್ರಾವತಿ ನದಿ ತುಂಬೆ ಡ್ಯಾಂ ಮೂಲಕ 6 ಮೀ. ನೀರು ನಿಲುಗಡೆ ಮಾಡಿದ್ದು, ಅದನ್ನು ನಿರಂತರ ದಾಸ್ತಾನು ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಶಂಭೂರು ಎಎಂಆರ್ ಡ್ಯಾಂನಲ್ಲಿ 9 ಮೀ. ನೀರು ದಾಸ್ತಾನು ಹೊಂದಿದ್ದು, ತುಂಬೆ ಡ್ಯಾಂಗೆ ಅಗತ್ಯ ಬಿದ್ದಲ್ಲಿ ಹರಿಯ ಬಿಡುವ ಮೂಲಕ ಬೇಸಗೆಯ ಕುಡಿಯುವ ನೀರಿನ ಬಳಕೆಗೆ ತೊಂದರೆ ಆಗದಂತೆ ಯೋಜನೆ ರೂಪಿಸಿದೆ. ಹಾಗಾಗಿ ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿಗೆ ತೊಂದರೆ ಆಗದು ಎಂಬುದಾಗಿ ತರ್ಕಿಸಲಾಗಿದೆ. ತುಂಬೆ ಡ್ಯಾಂ ಮತ್ತು ಶಂಭೂರು ಎಎಂಆರ್ ಡ್ಯಾಂ ಎರಡೂ ನರಿಕೊಂಬು ಬಹುಗ್ರಾಮ ಯೋಜನೆಯ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ಪೂರವಾಗಿರುವುದು ಒಂದು ಪ್ಲಸ್ ಪಾಯಿಂಟ್.
Related Articles
ನೇತ್ರಾವತಿ ನದಿಯಿಂದ ನೀರೆತ್ತುವ ಯೋಜನೆಯಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಯ ಮಾಣಿ ಮತ್ತು ನರಿಕೊಂಬು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಾಣಿ ಯೋಜನೆ 17.92 ಕೋ.ರೂ. ವೆಚ್ಚದಲ್ಲಿ 50 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವಂತೆ ರೂಪಿಸಲಾಗಿದೆ. ನರಿಕೊಂಬು ಯೋಜನೆ 18. 29 ಕೋ.ರೂ. ವೆಚ್ಚದಲ್ಲಿ 38 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವುದಾಗಿದೆ. 34.42 ಕೋ.ರೂ.ಗಳ ಸರಪಾಡಿ ಯೋಜನೆ 95 ಜನವಸತಿ ಪ್ರದೇಶಗಳಿಗೆ ನೀರು ಪೂರೈಸುವುದು.
Advertisement
ಬಂಟ್ವಾಳ ತಾ|ನಲ್ಲಿ ಫಲ್ಗುಣಿ ನದಿಯಿಂದ ನೀರೆತ್ತುವ ಸಂಗಬೆಟ್ಟು ಗ್ರಾಮಾಂತರ ಪ್ರದೇಶದ ಯೋಜನೆ ಪೂರ್ಣಗೊಂಡಿದೆ. 36.07 ಕೋ. ರೂ. ವೆಚ್ಚದ ಯೋಜನೆಗಳಲ್ಲಿ 65 ಜನವಸತಿ ಪ್ರದೇಶಗಳು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತವೆ.
ನೇತ್ರಾವತಿ ನದಿಯಿಂದ ಸಜೀಪ ಮುನ್ನೂರು ಗ್ರಾಮದಲ್ಲಿ ನೀರೆತ್ತುವ ಕರೋಪಾಡಿ ಬಹುಗ್ರಾಮ ಯೋಜನೆ 27.93 ಕೋ. ರೂ.ಗಳಲ್ಲಿ ಅನುಷ್ಠಾನಗೊಂಡಿದೆ. ಯೋಜನೆಯಿಂದ ಕರೋಪಾಡಿ ಸಹಿತ 79 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಇದೂ ಸಂಪೂರ್ಣ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ.
ಸ್ವಾವಲಂಬಿ ತಾಲೂಕುಬಂಟ್ವಾಳ ತಾ|ನ ಬಹುಗ್ರಾಮ ಕುಡಿಯುವ ನೀರಿನ ಐದು ಯೋಜನೆಗಳು ಸಮಗ್ರವಾಗಿ ಅನುಷ್ಠಾನಕ್ಕೆ ಬಂದು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಿದರೆ ಕುಡಿಯುವ ನೀರಿನ ವಿಚಾರದಲ್ಲಿ ಸಂಪೂರ್ಣ ಸ್ವಾವಲಂಬಿ ತಾಲೂಕು ಆಗಲಿದೆ. ಕಾಮಗಾರಿ ತ್ವರಿತ ಮಾಡಲು ಪ್ರಯತ್ನ
ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಬಂಟ್ವಾಳಕ್ಕೆ ಬಂದಿದ್ದಾಗ ನರಿಕೊಂಬು ಮತ್ತು ಸಂಗಬೆಟ್ಟುಗೆ ಭೇಟಿ ನೀಡಿದ್ದಾರೆ. ಸಂಗಬೆಟ್ಟು ಯೋಜನೆಯಲ್ಲಿ ಬೇಸಗೆ ಕೊನೆಯಲ್ಲಿ ನೀರಿನ ಕೊರತೆ ಆಗುವುದರಿಂದ ಫಲ್ಗುಣಿಯಲ್ಲಿ ಡ್ಯಾಂ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನರಿಕೊಂಬು ಯೋಜನೆಯನ್ನು ಇದೇ ವರ್ಷಕ್ಕೆ ಅನುಷ್ಠಾನಿಸಲು ಆದೇಶಿಸಿದ್ದಾರೆ. ಯೋಜನೆಗೆ ಶೇ. 50 ಅನುದಾನ ಕೇಂದ್ರ ಒದಗಿಸುವುದು. ಮುಂದಿನ ಹಂತದಲ್ಲಿ ಕಾಮಗಾರಿ ತ್ವರಿತ ಮಾಡಲು ಪ್ರಯತ್ನ ನಡೆಸಲಾಗುವುದು.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು,
ಶಾಸಕರು ಟಾಸ್ಕ್ ಫೋರ್ಸ್
ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಟಾಸ್ಕ್ ಫೋರ್ಸ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಡಳಿತದಿಂದ ಈಗಾಗಲೇ ಅನುದಾನ ಮಂಜೂರಾತಿಯೂ ಆಗಿದೆ. ಸ್ಥಳೀಯವಾಗಿ ಎಲ್ಲಿ ನೀರಿನ ಆವಶ್ಯಕತೆ ಇದೆಯೋ ಅಲ್ಲಿಗೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳಲು ತಾ.ಪಂ. ಸಭೆಯಲ್ಲಿಯೂ ನಿರ್ಣಯ ಮಾಡಲಾಗಿದೆ.
– ರಾಜಣ್ಣ
ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಜನೆ ತರುವುದಕ್ಕೆ ಸಾಕಷ್ಟು ಪ್ರಯತ್ನ
ನನ್ನ ಸೇವಾ ಅವಧಿಯಲ್ಲಿ ಅತ್ಯಂತ ಹೆಚ್ಚು ಸಮಾಧಾನ ತಂದಿರುವುದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿ. ಯೋಜನೆಗಳನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ತರುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಯೋಜನೆ ಮಂಜೂರಾತಿ ಮಾಡಿಸಿಕೊಂಡಿದ್ದಲ್ಲದೆ, ಪ್ರಗತಿಯಲ್ಲಿ ಇರುವ ಕೆಲಸಗಳು ಆದಾಗ ಬಂಟ್ವಾಳ ತಾಲೂಕಿನ ಶಾಶ್ವತ ಕುಡಿಯುವ ನೀರಿನ ಉದ್ದೇಶವು ಸಂಪೂರ್ಣ ಈಡೇರಿಸಿದಂತಾಗುವುದು.
-ಬಿ. ರಮಾನಾಥ ರೈ
ಮಾಜಿ ಸಚಿವರು ರಾಜಾ ಬಂಟ್ವಾಳ