ಕಳೆದ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಆ ರಾಜ್ಯಾದ್ಯಂತ ಹೆಚ್ಚಾಗಿ ಕೇಳಿಬರುತ್ತಿದ್ದುದು ಒಂದೇ ಹೆಸರು. ಅದು ಹಾರ್ದಿಕ್ ಪಟೇಲ್. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ರಾಜ್ಯಾವ್ಯಾಪಿ ಪಟೇಲ್ ಸಮುದಾಯವನ್ನು ಒಗ್ಗೂಡಿಸಿದ ಕೀರ್ತಿಯೂ ಹಾರ್ದಿಕ್ ಪಟೇಲ್‌ಗೇ ಸಲ್ಲುತ್ತದೆ. ತೀರಾ ಚಿಕ್ಕ ಹುಡುಗನಂತಿದ್ದ ಹಾರ್ದಿಕ್, ರಾಜ್ಯದಲ್ಲಿ ಮಾಡಿದ್ದ ಮೋಡಿ ಅಷ್ಟಿಷ್ಟಲ್ಲ, ಈ ಯುವಕನ ಸಾಮರ್ಥ್ಯ ಅರಿತ ಕಾಂಗ್ರೆಸ್, ಈತನನ್ನು ತನ್ನೊಳಗೆ ಸೇರಿಸಿಕೊಂಡು ಹಿಂದಿನ ವಿಧಾನಸಭೆ ಚುನಾವಣೆಗೆ ಹೋಗಿತ್ತು. ಹಾಗೆಯೇ ಬಿಜೆಪಿಯ ಭದ್ರಕೋಟೆಯನ್ನೇ ಒಂದು ಲೆಕ್ಕಾಚಾರದಲ್ಲಿ ಅಲುಗಾಡಿಸಿಬಿಟ್ಟಿತ್ತು.
ಆದರೆ ಈಗ ಕಾಲ ಬದಲಾಗಿದೆ. ಹಾರ್ದಿಕ್ ಪಟೇಲ್ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಪಕ್ಷ ಬಿಟ್ಟು ಬಿಜೆಪಿಯತ್ತ ಹೋಗಲು ಸಿದ್ಧರಾಗುತ್ತಿದ್ದಾರೆ. ಇದೇ ಹೊತ್ತಿಗೆ ಕೇಳಿಬರುತ್ತಿರುವ ಮತ್ತೂಂದು ಹೆಸರು ನರೇಶ್ ಪಟೇಲ್.
ಹೌದು, ಮೃದು ಮಾತಿನ, ಎಲ್ಲರಿಗೂ ಬೇಕಾದ, ಪಟೇಲ್ ಸಮುದಾಯದ ಉಪಜಾತಿಯಾದ ಲೇವಾಕ್ಕೆ ಸೇರಿದವರು. ಅಷ್ಟೇ ಅಲ್ಲ, ಪ್ರಬಲ ಸೌರಾಷ್ಟ್ರ ಭಾಗಕ್ಕೂ ಸೇರಿದವರು. ಅಷ್ಟೇ ಅಲ್ಲ, ಇಡೀ ಲೇವಾ ಸಮುದಾಯ ಅವರ ಬೆನ್ನಿಗೆ ನಿಂತಿದೆ ಎಂದರೂ ತಪ್ಪಾಗಲಾರದು. ಇದಕ್ಕೆ ಕಾರಣಗಳೂ ಇವೆ. 56 ವರ್ಷ ವಯಸ್ಸಿನ ನರೇಶ್ ಪಟೇಲ್, ಸೌರಾಷ್ಟ್ರ ಭಾಗದ ಪ್ರಸಿದ್ಧ ಉದ್ಯಮಿ. ಹಾಗೆಯೇ ದಾನ, ಧರ್ಮದಲ್ಲಿ ಎತ್ತಿದ ಕೈ. ಇವರ ಪ್ರಭಾವ ಗುಜರಾತ್‌ನ 182 ಕ್ಷೇತ್ರಗಳ ಪೈಕಿ 48ರಲ್ಲಿ ಇದೆ. ಜತೆಗೆ, ಶ್ರೀ ಖೋಡಾಲ್ದಾಮ್ ಟ್ರಸ್ಟ್‌ನ ಅಧ್ಯಕ್ಷರು. ಈ ಟ್ರಸ್ಟ್ ಖೋಡಿಯಾರ್ ದೇವಸ್ಥಾನದ ನಿರ್ವಹಣೆ ಮಾಡುತ್ತದೆ. ಜತೆಗೆ, ಪಟೇಲ್ ಬ್ರಾಸ್‌ವರ್ಕ್(ಪಿಬಿಡಬ್ಲ್ಯು)ನ ನಿರ್ದೇಶಕರಾಗಿದ್ದು, ಇದನ್ನು ನರೇಶ್ ಪಟೇಲ್ ತಂದೆ 1948ರಲ್ಲಿ ಸ್ಥಾಪಿಸಿದ್ದರು.
ಇದು ಆಟೋಮೊಬೈಲ್‌ನಿಂದ ಹಿಡಿದು ವಿಮಾನಗಳಿಗೆ ಬೇಕಾದ ವಸ್ತುಗಳನ್ನು ತಯಾರು ಮಾಡುತ್ತದೆ. 2013ರಲ್ಲಿ ನರೇಶ್ ಪಟೇಲ್ ಸರ್ಕಾರ್ ಪಟೇಲ್ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಈ ಮೂಲಕ ಸರಕಾರಿ ಉದ್ಯೋಗ ಸೇರುವವರಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಜತೆಗೆ ಖೋಡಾಲ್ದಾಮ್ ಸಮಾಧಾನ ಪಂಚ್ ಎಂಬುದನ್ನು ರಚಿಸಿ, ಇದರ ಮೂಲಕ ವಿವಾದಗಳನ್ನು ಬಗೆಹರಿಸುತ್ತಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸ್ವಯಂ ಸೇವಕರಾಗಿದ್ದಾರೆ.
ಈ ಎಲ್ಲ ಕಾರ್ಯಗಳನ್ನು ಮಾಡುತ್ತಿರುವುದರಿಂದ ಲೇವಾ ಸಮುದಾಯದ ಯುವಕರು ಸೇರಿ ಎಲ್ಲರೂ ಇವರ ಬೆನ್ನಿಗೆ ನಿಂತಿದ್ದಾರೆ ಎಂಬ ವಿಶ್ಲೇಷಣೆಗಳಿವೆ. ಈಗ ನರೇಶ್ ಅವರ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ. ಮೂಲಗಳು ಹೇಳಿರುವಂತೆ ಈಗಾಗಲೇ ಒಂದೆರಡು ಬಾರಿ ಕಾಂಗ್ರೆಸ್ ಹೈಕಮಾಂಡ್ ಜತೆಗೆ ಮಾತುಕತೆಯೂ ನಡೆದಿದೆ. ಆದರೆ ನರೇಶ್ ಪಟೇಲ್ ಅವರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.