ಪುಲ್ವಾಮಾದಲ್ಲಿ ಫೆ.14 ರಂದು ದಾಳಿ ನಡೆದಿದ್ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಸ್ವಲ್ಪ ತಡವಾಗಿ ತಿಳಿಸಲಾಗಿತ್ತು ಎನ್ನಲಾಗಿದೆ. ಇದಕ್ಕಾಗಿ ಪ್ರಧಾನಿ ವಿಪರೀತ ಸಿಟ್ಟಾಗಿದ್ದರು. ಘಟನೆಯ ವಿವರ ತಿಳಿಯುತ್ತಿದ್ದಂತೆಯೇ, ಉತ್ತರಾ ಖಂಡದ ರುದ್ರಾಪುರದಲ್ಲಿ ಹಮ್ಮಿ ಕೊಂಡಿದ್ದ ರ್ಯಾಲಿ ರದ್ದುಗೊಳಿ ಸಿದ್ದರು. ಹವಾಮಾನ ವೈಪರೀತ್ಯ ಹಾಗೂ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರಿಗೆ ಮಾಹಿತಿ ನೀಡುವಲ್ಲಿ 25 ನಿಮಿಷ ವಿಳಂಬವಾಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ತಕ್ಷಣವೇ ದೆಹಲಿಗೆ ವಾಪಸಾಗಲು ಅವರು ಬಯಸಿದ್ದರಾದರೂ, ಹವಾಮಾನ ವೈಪರೀತ್ಯದಿಂದಾಗಿ ರಾತ್ರಿ ದೆಹಲಿಗೆ ವಾಪಸಾಗಲು ಸಾಧ್ಯವಾಯಿತು.ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಅಂದು ಅವರು ಹುಲಿ ಸಫಾರಿ, ಪರಿಸರ ಪ್ರವಾಸೋದ್ಯಮ ವಲಯ ಹಾಗೂ ರಕ್ಷಣಾ ಕೇಂದ್ರ ಉದ್ಘಾಟಿಸಿದ್ದರು. ಬೆಳಗ್ಗೆ 7ಕ್ಕೆ ಅಲ್ಲಿ ತಲುಬೇಕಿತ್ತಾದರೂ, ಹವಾಮಾನ ವೈಪರೀತ್ಯದಿಂದ ಮಧ್ಯಾಹ್ನ 11.15 ಕ್ಕೆ ಅಲ್ಲಿ ತಲುಪಿದ್ದರು. ದಾಳಿ ನಡೆದ ನಂತರ ಉತ್ತಮ ನೆಟ್‌ವರ್ಕ್ ಸಂಪರ್ಕವಿರುವ ರಾಮನಗರಕ್ಕೆ ಅವರು ಆಗಮಿಸಿದ್ದರು. ಅಲ್ಲಿಂದ ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ನಂತರ ಹೊಂಡ ಬಿದ್ದ ರಸ್ತೆಯ ಮಾರ್ಗದಲ್ಲೇ ಅವರು ಬರೇಲಿಗೆ ಬಂದು ಅಲ್ಲಿಂದ ಹೊಸದಿಲ್ಲಿಗೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಅವಧಿಯಲ್ಲಿ ಅವರು ಆಹಾರವನ್ನೂ ಸೇವಿಸಿಲ್ಲ ಎಂದು ಹೇಳಲಾಗಿದೆ. ಪುಲ್ವಾಮಾ ದಾಳಿ ನಡೆದ ನಂತರವೂ ಮೋದಿ ಉತ್ತರಾಖಂಡದ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಕಾಲ ಕಳೆಯುತ್ತಿದ್ದರು ಎಂದು ಕಾಂಗ್ರೆಸ್ ಆರೋಪಿಸಿದ್ದು, ಉತ್ತರಾಖಂಡದ ರುದ್ರಾಪುರದ ರ್ಯಾಲಿಯಲ್ಲಿ ಫೋನ್ ಮೂಲಕ ಭಾಷಣ ಮಾಡಿದ್ದಾರೆ ಎಂದೂ ಆರೋಪಿಸಿದೆ.
ಗುರುವಾರ ಈ ಸಂಬಂಧ ಕಾಂಗ್ರೆಸ್ ವಕ್ತಾರ ಸುರ್ಜೆವಾಲ ಆರೋಪಿಸಿದ್ದರು. ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಆರೋಪಿಸಿದ್ದು, ಮೋದಿಯನ್ನು ಪ್ರೈಮ್ ಟೈಮ್ ಸರ್ಕಾರ್ ಹಾಗೂ ಫೋಟೋಶೂಟ್ ಸರ್ಕಾರ್ ಎಂದು ಟೀಕಿಸಿದ್ದಾರೆ.