ಡಿಬ್ರಗಢ್: ಇತ್ತೀಚೆಗಷ್ಟೇ ದೇಶದ ಅತಿ ಉದ್ದದ ಸುರಂಗ ರಸ್ತೆ ಉದ್ಘಾಟನೆಗೊಳಿಸಿದ್ದ ಕೇಂದ್ರ ಸರಕಾರ ಇದೀಗ ದೇಶದ ಅತಿ ಉದ್ದದ ನದಿ ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಚೀನ ಗಡಿ ಸಮೀಪ, ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಗೆ ಕಟ್ಟಿರುವ 9.15 ಕಿ.ಮೀ. ಉದ್ದದ ಈ ಸೇತುವೆಯನ್ನು ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಿದ್ದಾರೆ.
ಇದೇ ದಿನ ಕೇಂದ್ರದಲ್ಲಿ ಎನ್‌ಡಿಎ ಆಡಳಿತದ ಮೂರು ವರ್ಷಗಳು ಪೂರ್ಣಗೊಳ್ಳಲಿದ್ದು, ಇಲ್ಲೇ ಸಂಭ್ರಮಾಚರಣೆಗಳು ಅಸ್ಸಾಂನಲ್ಲೇ ಗರಿಗೆದರಲಿವೆ. ಸಾರ್ವಜನಿಕ ವಾಹನಗಳ ಸಂಚಾರಕ್ಕೂ ಮುಖ್ಯವಾಗಿ ಸಿನೋ-ಇಂಡಿಯನ್ ಗಡಿಯಲ್ಲಿ ಭಾರತದ ರಕ್ಷಣಾ ಸರಕು-ಸಾಧನ, ವಾಹನಗಳ ಸುಲಭ ಸಾಗಣೆಗೆ ಈ ಸೇತುವೆ ಹೆಚ್ಚು ನೆರವಾಗಲಿದೆ. ಇದರೊಂದಿಗೆ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನ ನಾಗರಿಕರು ವಿಮಾನ ಮತ್ತು ರೈಲು ಸಾರಿಗೆ ವ್ಯವಸ್ಥೆಗಳಿಗೆ ಸಂಪರ್ಕ ಪಡೆಯುವಲ್ಲಿ ಸೇತುವೆ ಪ್ರಮುಖ ಪಾತ್ರ ವಹಿಸಲಿದೆ.
ಈಶಾನ್ಯ ಭಾಗದಲ್ಲಿ ರಸ್ತೆ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಜತೆಗೆ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಾಗರಿಕರಿಗೆ ಈ ಸೇತುವೆ ಹೆಚ್ಚು ನೆರವಾಗಲಿದೆ. ಇದರೊಂದಿಗೆ ರಕ್ಷಣಾ ಇಲಾಖೆಯ ಸಾರಿಗೆ-ಸಾಗಣೆ ಅಗತ್ಯಗಳಿಗೆ ಹೆಚ್ಚು ಬಳಕೆಯಾಗಲಿದೆ,’ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಹೇಳಿದ್ದಾರೆ.
ಈವರೆಗೆ ದೇಶದ ಅತಿ ಉದ್ದದ ನೀರ ಮೇಲಿನ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮುಂಬೈನ ಬಾಂದ್ರಾ-ವೊರ್ಲಿ ಸೀ ಲಿಂಕ್ (5.75. ಕಿ.ಮೀ.) ಸೇತುವೆಗಿಂತಲೂ 3.55 ಕಿ.ಮೀ. ಹೆಚ್ಚು ಉದ್ದವಾಗಿರುವ ಧೋಲಾ-ಸದಿಯಾ ಸೇತುವೆ ನಿರ್ಮಾಣಕ್ಕೆ ಅಂದಾಜು 950 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೇತುವೆಯು ಚೀನ ಗಡಿಗೆ ಅತಿ ಸಮೂಪದಲ್ಲಿರುವ ಕಾರಣ ತುರ್ತು ಸಂದರ್ಭಗಳಲ್ಲಿ ಗಡಿ ಭಾಗಕ್ಕೆ ಟ್ಯಾಂಕರ್ ಮತ್ತಿತರ ಯುದ್ಧ ಸಾಧನಗಳು ಹಾಗೂ ಸೈನಿಕರನ್ನು ಅತಿ ಕಡಿಮೆ ಸಮಯದಲ್ಲಿ ರವಾನಿಸಬಹುದಾಗಿದೆ. ಸೇತುವೆಯಿಂದಾಗಿ ಅಸ್ಸಾಂ, ಅರುಣಾಚಲದ ಜನರ ಪ್ರಯಾಣ ಅವಧಿಯಲ್ಲಿ ನಾಲ್ಕು ತಾಸು ಉಳಿತಾಯವಾಗಲಿದೆ.
– 60 ಟನ್ ತೂಕದ ಯುದ್ಧ ಟ್ಯಾಂಕರ್ ಹೊರಬಲ್ಲ ಬ್ರಿಡ್ಜ್
– 9.15 ಕಿ.ಮೀ ಧೋಲಾ-ಸದಿಯಾ ಸೇತುವೆಯ ಒಟ್ಟು ಉದ್ದ
– 3.55 ಕಿ.ಮೀ ಬ್ಯಾಂಡ್ರಾ-ವೊರ್ಲಿ ಸೀ ಲಿಂಕ್‌ಗಿಂತ ಹೆಚ್ಚು ಉದ್ದ
– 950 ಕೋಟಿ ಬ್ರಿಡ್ಜ್ ನಿರ್ಮಾಣಕ್ಕೆ ತಗುಲಿದ ವೆಚ್ಚ
– 4 ತಾಸು ಉಳಿತಾಯವಾಗುವ ಪ್ರಯಾಣ ಸಮಯ