Advertisement

ಮೋದಿಗೂ ಗೊತ್ತು ಖರ್ಗೆ ಕಳಂಕಿತರಲ್ಲ: ಪ್ರಿಯಾಂಕ್‌

05:39 AM Mar 08, 2019 | |

ವಾಡಿ: ಕಲಬುರಗಿ ನಗರಕ್ಕೆ ಬಂದು ಹೋದ ಪ್ರಧಾನಿ ನರೇಂದ್ರ ಮೋದಿ ಅವರು ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತನಾಡುತ್ತಾರೆ ಎನ್ನುವ ನಿರೀಕ್ಷೆಯಿತ್ತು. ತಂದೆ-ಮಗನ ರಾಜಕಾರಣದಲ್ಲಿ ಏನಾದರೂ ತಪ್ಪು ಸಿಗಬಹುದೇ ಎಂದು ಯೋಚಿಸಿದ್ದ ಬಿಜೆಪಿಗರಿಗೆ ಭಾರಿ ನಿರಾಶೆಯಾಗಿದ್ದು, ಮೋದಿಗೂ ಗೊತ್ತು ಖರ್ಗೆ ಕಳಂಕಿತ ರಾಜಕಾರಣಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಗುರುವಾರ ನಾಲವಾರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 72 ಕೋಟಿ ರೂ. ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಭಾರಿ ಪ್ರಮಾಣದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ಅಂಬಾನಿ, ಅದಾನಿ ಕೈಗೆ ಸಾವಿರಾರು ಕೋಟಿ ರೂ. ಇಟ್ಟರು. ಇದು ದೇಶದ ಕೀಲಿಕೈ ಕಳ್ಳರ ಕೈಯಲ್ಲಿ ಕೊಟ್ಟಂತಾಗಿದೆ. ಮೋದಿ ಬಾಯಿ ಬಿಟ್ಟರೆ ವಿಷ ಕಾರುವ ವ್ಯಕ್ತಿ. ಆದರೆ ಕಲಬುರಗಿಯಲ್ಲಿ ನಮ್ಮ ವಿರುದ್ಧ ತುಟಿಪಿಟಕ್ಕೆನ್ನಲಿಲ್ಲ.
ಕಾರಣ ನಾವು ಯಾರ ಮನೆಯಲ್ಲೂ ಉಂಡಿಲ್ಲ, ತಿಂದಿಲ್ಲ. ನಮ್ಮ ಬಗ್ಗೆ ಮಾತನಾಡಲು ವಿರೋಧಿಗಳಿಗೆ ವಿಷಯವೇ ಇಲ್ಲ ಎಂದು ಚಾಟಿ ಬೀಸಿದರು.

ಪ್ರತಿ ಜಿಲ್ಲೆಗೂ ಸಂಯುಕ್ತ ವಸತಿ ನಿಲಯ: ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆ ಇರುವುದರಿಂದ ತುಳಿತಕ್ಕೊಳಗಾದ ಶೋಷಿತ ಜನರಿಗೆ ಶಿಕ್ಷಣ ಲಭ್ಯವಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರವಲ್ಲದೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಉದ್ದೇಶ ಸಮಾಜ ಕಲ್ಯಾಣ ಇಲಾಖೆಯದ್ದಾಗಿದೆ. 500 ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಬಲ್ಲ ಸಂಯುಕ್ತ ವಸತಿ ನಿಲಯ ಪ್ರತಿ ಜಿಲ್ಲೆಯಲ್ಲೂ ಶೀಘ್ರವೇ ಸ್ಥಾಪನೆಯಾಗಲಿವೆ ಎಂದರು.

ನಮ್ಮ ವಿರುದ್ಧ ಯಾರು ಏನೇ ಮಾತನಾಡಿದರೂ ತಲೆಕೆಡಿಕೊಳ್ಳುವುದಿಲ್ಲ. ಮತಹಾಕಿ ಗೆಲ್ಲಿಸಿದ ಕ್ಷೇತ್ರದ ಜನರ ಅಭಿವೃದ್ಧಿ ಕಡೆಗೆ ನಮ್ಮ ಚಿಂತನೆ. ಇಷ್ಟು ದಿನ ನಮ್ಮೊಂದಿಗಿದ್ದು, ನೀನೇ ಚಂದ್ರ, ನೀನೇ ಇಂದ್ರ ಎನ್ನುತ್ತಿದ್ದವರು ಈಗ ನಮ್ಮ ವಿರುದ್ಧವೇ ಕೆಟ್ಟ ನುಡಿಗಳನ್ನು ಆಡುತ್ತಿದ್ದಾರೆ. ನೀವು ನಿಜವಾಗಲು ನಿಜಶರಣನ ಭಕ್ತರಾಗಿದ್ದರೆ ಸತ್ಯವನ್ನೇ ಹೇಳಬೇಕು. ನೀವು ಆರೇಳು ಸಲ ಗೆದ್ದು ಮಂತ್ರಿಯೂ ಆಗಿದ್ದೀರಲ್ಲ. ಕೋಲಿ ಸಮಾಜಕ್ಕೆ ನೀವೇನು ಮಾಡಿದ್ದೀರಿ ಹೇಳಿ ನೋಡೋಣ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಶಿವಮೊಗ್ಗದಲ್ಲಿ ಯಾರದ್ದು ಜಾಸ್ತಿಯಾಗಿದೆ?: ಕಲಬುರಗಿಯಲ್ಲಿ ಅಪ್ಪ ಮಗಂದೇ ಜಾಸ್ತಿ ಆಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಶಿವಮೊಗ್ಗಾದಲ್ಲಿ ಯಾರದ್ದು ಜಾಸ್ತಿಯಾಗಿದೆ ಎಂದು ಕೇಳುವ ಮೂಲಕ ಯಡಿಯೂರಪ್ಪ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ತಾಪಂ ಅಧ್ಯಕ್ಷ ಜಗನಗೌಡ ಪಾಟೀಲ, ಕಾಂಗ್ರೆಸ್‌ ಹಿರಿಯ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಭಾಗಣ್ಣಗೌಡ ಸಂಕನೂರ, ಮಲ್ಲಿನಾಥಗೌಡ ಸನ್ನತಿ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೆಮೂದ್‌ ಸಾಹೇಬ, ಜಿಪಂ ಸದಸ್ಯರಾದ ಭಾಗಪ್ಪ ಯಾದಗಿರಿ, ಸೋನಿಬಾಯಿ ಚವ್ಹಾಣ, ತಾಪಂ ಸದಸ್ಯೆ ದಾನಮ್ಮ ಮುಸ್ಲಾ, ತೋಪಣ್ಣ ಕೋಮಟೆ, ಶಿವರೆಡ್ಡಿಗೌಡ ಸೋಮರೆಡ್ಡಿ, ಶಂಕ್ರಯ್ಯಸ್ವಾಮಿ ಮದರಿ, ಜಾಫರ್‌ ಪಟೇಲ, ಸಿದ್ದುಗೌಡ ಇಟಗಿ, ಸೂರ್ಯಕಾಂತ ರದ್ದೇವಾಡಿ ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು. ಗುರುಗೌಡ ಇಟಗಿ ಸ್ವಾಗತಿಸಿದರು. ಶಶಿಕಲಾ ಜಡೆ ನಿರೂಪಿಸಿದರು, ಶರಣು ವಾರದ ವಂದಿಸಿದರು.

ಡಾಕ್ಟರ್‌ ಅಲ್ಲ.. ಆಮಿಷ ಜಾಧವ್‌!
ನಮ್ಮಿಂದ ಬೇರ್ಪಟ್ಟಿರುವ ಡಾ| ಉಮೇಶ ಜಾಧವ್‌, ಕಮಲ ತೆಕ್ಕೆಗೆ ಜಾರುವ ಮೂಲಕ ಆಮಿಷ ಜಾಧವ್‌ ಆಗಿದ್ದಾರೆ. ಈ ಮಾತು ನಾನು ಹೇಳುತ್ತಿಲ್ಲ. ಅದನ್ನು ಮಾನ್ಯ ಯಡಿಯೂರಪ್ಪನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಕೋಟಿ ಕೋಟಿ ಹಣಕ್ಕೆ ಡೀಲ್‌ ಮಾಡಿದ ಆಡಿಯೋ ಕ್ಲಿಪ್ಪಿಂಗ್‌ ಇಡೀ ರಾಜ್ಯದ ಜನ ಕೇಳಿಸಿಕೊಂಡಿದ್ದಾರೆ. ಖರ್ಗೆ ವಿರುದ್ಧ ಸ್ಪರ್ಧಿಸಲು ಹೊರಟಿರುವ ವ್ಯಕ್ತಿಗೆ ಮೋದಿ ಅವರು ಸೌಜನ್ಯಕ್ಕಾದರೂ ಮಾತನಾಡಿಸಲಿಲ್ಲ. ಯಡಿಯೂರಪ್ಪನವರಿಗೂ ಮೋದಿ ಕ್ಯಾರೆ ಎನ್ನಲಿಲ್ಲ. ಇದು ಅಪಮಾನವಲ್ಲವೇ? 
 ಪ್ರಿಯಾಂಕ್‌ ಖರ್ಗೆ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next