Advertisement

ಚೀನ ಮದವಿಳಿಸಲು ಮೋದಿಯೇ ಸರಿ; ಪ್ರಧಾನಿ ಮೇಲೆ ಭಾರತಕ್ಕಿದೆ ಅದಮ್ಯ ವಿಶ್ವಾಸ

01:27 PM Jun 25, 2020 | mahesh |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ಭಾರತ ಮತ್ತು ಭಾರತೀಯರಿಗೆ ಅದೇನೋ ಅದಮ್ಯ ನಂಬಿಕೆ. ದೇಶಕ್ಕೆ ಎಂಥದ್ದೇ ಸಮಸ್ಯೆ ಎದುರಾದರೂ ಮೋದಿ ಪರಿಹರಿಸುತ್ತಾರೆ ಎಂಬ ವಿಶ್ವಾಸ. ಭಾರತೀಯರು ಪ್ರಧಾನಿ ಮೋದಿ ಅವರನ್ನು ಅದೆಷ್ಟು ನಂಬುತ್ತಾರೆ ಎಂಬುದನ್ನು ಈಗಾಗಲೇ ಹತ್ತು ಹಲವು ಸಮೀಕ್ಷೆಗಳು ಸಾಬೀತು ಪಡಿಸಿವೆ. ಇದೀಗ ಚೀನ ಎಂಬ ಮದ್ದಾನೆಯ ಪಳಗಿಸಲು ಮೋದಿಯೇ ಸರಿಯಾದ ಮಾವುತ ಎಂಬುದು ದೇಶವಾಸಿಗಳ ನಂಬಿಕೆಯಾಗಿದೆ.

Advertisement

ಸಮೀಕ್ಷೆಗಳನ್ನು ಪಕ್ಕಕ್ಕಿರಿಸಿ ನೋಡುವುದಾದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪಾಕಿಸ್ಥಾನ ಬಾಲ ಮುದುರಿಕೊಂಡು ಕುಳಿತಿದೆ ಎಂಬ ಸತ್ಯ ಕಣ್ಣ ಮುಂದಿದೆ. ಪಾಕಿಗಳ ಕಿತಾಪತಿಗೆ ಅವರ ಭಾಷೆಯಲ್ಲೇ ಉತ್ತರ ನೀಡಿರುವ ದೇಶದ ನೆಚ್ಚಿನ ಪ್ರಧಾನಿಯ ಮುಂದೆ ಈಗ ಚೀನ ಎಂಬ ದೊಡ್ಡ ಶತ್ರು ತಲೆಯೆತ್ತಿ ನಿಂತಿದೆ. ಈ ಶತ್ರುವನ್ನೂ ಮೋದಿ ಸಮರ್ಥವಾಗಿ ಬಗ್ಗುಬಡಿಯುತ್ತಾರೆ ಎಂದೇ ಇಡೀ ಭಾರತ ನಂಬಿದೆ.

ಜೂ.15ರಂದು ಲಡಾಖ್‌ನಲ್ಲಿ 20 ಮಂದಿ ಭಾರತೀಯ ಯೋಧರ ಬಲಿ ಪಡೆದ ಚೀನ ವಿರುದ್ಧ ಮೋದಿ ಸೇಡು ತೀರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ದೇಶವಾಸಿಗಳು ಹೊಂದಿದ್ದಾರೆ ಎಂದು ಸಿವೋಟರ್‌ ಸಮೀಕ್ಷೆ ತಿಳಿಸಿದೆ. ಲಡಾಖ್‌ ದಾಳಿಯ ಮರುದಿನ ನಡೆಸಿದ ಸಮೀಕ್ಷೆ ವೇಳೆ ಜನತೆ ಎಂದಿನಂತೆ ಪ್ರಧಾನಿ ಮೇಲೆ ಅಪರಿಮಿತ ನಂಬಿಕೆ ತೋರಿದ್ದಾರೆ. ಇನ್ನೊಂದೆಡೆ ಚೀನ, ಪಾಕಿಸ್ಥಾನಕ್ಕಿಂತಲೂ ಅತಿ ದೊಡ್ಡ ಶತ್ರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತೀಕಾರದ ನಿರೀಕ್ಷೆ
ಗಡಿಯಲ್ಲಿ ಚೀನ ನಡೆಸುತ್ತಿರುವ ಕುತಂತ್ರಗಳಿಗೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲೇಬೇಕು ಎಂಬುದು ಜನರ ಬಯಕೆ. ಇದೇ ವೇಳೆ ಇದುವರೆಗೂ ಡ್ರ್ಯಾಗನ್‌ಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿಲ್ಲ ಎಂಬ ಅಸಮಾಧಾನವೂ ಇದೆ. ಹಾಗೇ ಆ ಶತ್ರು ರಾಷ್ಟ್ರದೊಂದಿಗೆ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ನಡೆಸಕೂಡದು ಎಂದು ನಾಗರಿಕರು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಚೀನ ವಸ್ತುಗಳ ನಿಷೇಧಕ್ಕೆ ಒಲವು
ಗಡಿಯಲ್ಲಿ ಚೀನದ ದುಸ್ಸಾಹಸಕ್ಕೆ ಕಡಿವಾಣ ಹಾಕಬೇಕಿದ್ದರೆ ಅಲ್ಲಿಂದ ಆಮದಾಗುವ ಮೊಬೆ„ಲ್‌ ಫೋನ್‌, ಟಿ.ವಿ, ಎಲೆಕ್ಟ್ರಾನಿಕ್‌ ಉಪಕರಣಗಳು ಹಾಗೂ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ನಿಷೇಧಿಸಬೇಕು ಎಂದು ದೇಶದ ಶೇ.80ಕ್ಕೂ ಅಧಿಕ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ. 68.2 ಮಂದಿ ಇನ್ನುಮುಂದೆ ಚೀನ ಉತ್ಪನ್ನಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ.

Advertisement

ದೇಶದ ಜನ ಹೇಳುವುದೇನು?
– ಚೀನ ಈಗ ಪಾಕಿಸ್ಥಾನಕ್ಕಿಂತಲೂ ದೊಡ್ಡ ಶತ್ರು, ಅದುವೇ ನಂ.1 ಸಮಸ್ಯೆ
– ಭಾರತೀಯ ಯೋಧರ ಬಲಿಪಡೆದ ಶತ್ರುವಿಗೆ ತಕ್ಕ ಉತ್ತರ ನೀಡಲೇಬೇಕು
-ಡ್ರ್ಯಾಗನ್‌ ಅನ್ನು ಪ್ರಧಾನಿ ಮೋದಿ ಬಗ್ಗುಬಡಿಯುತ್ತಾರೆ ಎಂಬ ವಿಶ್ವಾಸ
– ವಿಪಕ್ಷಗಳ ಬೆಂಬಲಿಗರಿಗೂ ಪ್ರಧಾನಿ ಮೋದಿ ಮೇಲೆ ನಂಬಿಕೆಯಿದೆ

ಶೇ.89 ಚೀನ ವಿಷಯದಲ್ಲಿ ಮೋದಿ ಮೇಲೆ ನಂಬಿಕೆ ಹೊಂದಿರುವವರು
ಶೇ.68.3 ಪಾಕ್‌ಗಿಂತ ಚೀನವೇ ದೊಡ್ಡ ಶತ್ರು ಎಂದವರು
ಶೇ.31.7 ಪಾಕಿಸ್ಥಾನವೇ ದೊಡ್ಡ ದುಷ್ಮನ್‌ ಎನ್ನುವವರು
ಶೇ.60 ಚೀನಗೆ ತಕ್ಕ ಉತ್ತರ ನೀಡಿಲ್ಲ ಅಂದುಕೊಂಡವರು
ಶೇ.39.8 ಭಾರತ ತಕ್ಕ ಉತ್ತರ ನೀಡಿದೆ ಎಂದು ನಂಬಿರುವವರು
ಶೇ.73.6 ಪ್ರತಿಪಕ್ಷಗಳಿಗಿಂತಲೂ ಹೆಚ್ಚಾಗಿ ಸ‌ರಕಾರವ ನಂಬಿರುವವರು
ಶೇ.61.3 ರಾಹುಲ್‌ ಗಾಂಧಿ ಮೇಲೆ ನಂಬಿಕೆ ಇಲ್ಲ ಎಂದವರು
ಶೇ.68.2 ಚೀನ ವಸ್ತುಗಳನ್ನು ಬಳಸುವುದಿಲ್ಲ ಎಂದವರು

Advertisement

Udayavani is now on Telegram. Click here to join our channel and stay updated with the latest news.

Next