ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಭ್ರಷ್ಟ ಅಧಿಕಾರಿಗಳ ಕುಣಿಕೆಯನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದೆಡೆಗೆ ಹೊಸ ಹೆಜ್ಜೆ ಇಡುವ ಸಂಕಲ್ಪವನ್ನು ಪ್ರಕಟಿಸಿದೆ.
ಈ ನಿಟ್ಟಿನಲ್ಲಿ ಪ್ರತಿಯೊಂದು ಸಚಿವಾಲಯದ ಜಾಗೃತ ವಿಭಾಗವು ಭಷ್ಟ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಅಧಿಕಾರಿಗಳ ವಿರುದ್ದ ಸರಕಾರವು ಆಗಸ್ಟ್ 15ರ ಬಳಿಕ ಕ್ರಮ ತೆಗೆದುಕೊಳ್ಳಲಿದೆ.
ಈಗ ತಿಳಿದು ಬಂದಿರುವಂತೆ ಗೃಹ ವ್ಯವಹಾರಗಳ ಸಚಿವಾಲಯವು ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಿ ಭ್ರಷ್ಟರ ಪಟ್ಟಿಯನ್ನು ಸಿದ್ಧಪಡಿಸಲು ಮುಂದಾಗಿದೆ. ಆಗಸ್ಟ್ 5ರೊಳಗಾಗಿ ಈ ರೀತಿಯ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವಾಲಯವು ವಿವಿಧ ಇಲಾಖೆಗಳಿಗೆ ಹಾಗೂ ಅರೆಸೈನಿಕ ದಳಕ್ಕೆ ಸೂಚನಾ ಪತ್ರಗಳನ್ನು ರವಾನಿಸಿದೆ.
ತನಿಖೆಯ ಅನಂತರದಲ್ಲಿ ಅಥವಾ ತನಿಖೆಯ ಸಂದರ್ಭದಲ್ಲಿ ವಿಶ್ವಾಸಾರ್ಹತೆ ಮತ್ತು ಸತ್ಯಸಂಧತೆಯ ಕೊರತೆ ಕಂಡು ಬರುವ ಅಧಿಕಾರಿಗಳ ಹೆಸರುಗಳನ್ನು ಈ ಪಟ್ಟಿಗೆ ಸೇರಿಸಲಾಗುವುದೆಂದು ತಿಳಿದುಬಂದಿದೆ.
ಆಯಾ ಸಚಿವಾಲಯಗಳು ತಮ್ಮ ಇಲಾಖೆಯು ಸಿದ್ಧಪಡಿಸುವ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ಒಳಗೊಂಡ ಕಡತವನ್ನು ಸಿಬಿಐಗೆ ಮತ್ತು ಕೇಂದ್ರ ಜಾಗೃತ ಆಯೋಗಕ್ಕೆ ಒಪ್ಪಿಸಲಿದೆ. ಭ್ರಷ್ಟರ ಪಟ್ಟಿಯಲ್ಲಿ ಕಂಡು ಬರುವ ಅಧಿಕಾರಿಗಳ ಮೇಲೆ ಸಿಬಿಐ ಮತ್ತು ಜಾಗೃತ ದಳ ಕಣ್ಣಿಡಲಿದೆ.