Advertisement

ನಬಾರ್ಡ್ ಸಹಯೋಗದೊಂದಿಗೆ ಜಮ್ಮು-ಕಾಶ್ಮೀರ, ಲಢಾಕ್ ಭಾಗದ ರೈತರಿಗೆ ಕೇಂದ್ರದ ನೆರವು

09:43 AM Nov 13, 2019 | Hari Prasad |

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಸರಿ, ಪೀಚ್ ಹಣ್ಣುಗಳು ಮತ್ತು ಅಕ್ರೋಡು (ವಾಲ್ ನಟ್) ಹಣ್ಣುಗಳನ್ನು ಬೆಳೆಯುವ ರೈತರಿಗೆ ನಬಾರ್ಡ್ ಬ್ಯಾಂಕಿನ ಸಹಯೋಗದೊಂದಿಗೆ ಸಹಾಯ ಹಸ್ತವನ್ನು ಚಾಚಲು ಕೇಂದ್ರ ಸರಕಾರ ಇದೀಗ ಸಿದ್ಧವಾಗಿದೆ.

Advertisement

ಜಮ್ಮು ಕಾಶ್ಮೀರ ಭಾಗದಲ್ಲಿ ದೇಶದಲ್ಲೇ ಅಧಿಕ ಪ್ರಮಾಣದಲ್ಲಿ ಈ ಕೇಸರಿ, ಪೀಚ್ ಹಣ್ಣುಗಳು ಮತ್ತು ಅಕ್ರೋಡನ್ನು ಬೆಳೆಯಲಾಗುತ್ತದೆ. ಈ ಹಿಂದೆ ಕೇಂದ್ರ ಸರಕಾರವು ಇಲ್ಲಿನ ರೈತರು ಬೆಳೆಯುವ ಸೇಬು ಹಣ್ಣುಗಳನ್ನು ನೇರವಾಗಿ ತಾನೇ ಖರಿದಿಸಲು ಪ್ರಾರಂಭಿಸಿತ್ತು.

ಈ ಎಲ್ಲಾ ಬೆಳೆಗಳನ್ನು ಬೆಳೆಯುವ ಜಮ್ಮು ಕಾಶ್ಮೀರ ಭಾಗದ ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿರುವ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ (ನಬಾರ್ಡ್) ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಗ್ರಾಮೀಣ ಮತ್ತು ಕೃಷಿ ಆರ್ಥಿಕ ನೆರವು ಎಂಬ ವಿಚಾರಕ್ಕೆ ಸಂಬಂಧಿಸಿದ ಜಾಗತಿಕ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ಜಮ್ಮು ಕಾಶ್ಮೀರದ ಜೊತೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಇನ್ನೊಂದು ಕೇಂದ್ರಾಡಳಿತ ಪ್ರದೇಶ ಲಢಾಕ್ ನಲ್ಲಿ ಸೌರಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲೂ ಸಹ ಕೇಂದ್ರ ಸರಕಾರ ಯೋಚಿಸಿದೆ ಎಂದು ಸೀತಾರಾಮನ್ ಅವರು ತಿಳಿಸಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಈ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಯಾವ ರೀತಿಯ ನೆರವನ್ನು ನೀಡಬಹುದು ಎಂಬುದನ್ನು ಪರಾಮರ್ಶಿಸುವ ಉದ್ದೇಶದಿಂದ ನಬಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿರುವ ಹರ್ಷ ಕುಮಾರ್ ಭನ್ವಾಲಾ ಅವರೊಂದಿಗೆ ತಾನು ಶೀಘ್ರದಲ್ಲೇ ಈ ಭಾಗಗಳಿಗೆ ಭೇಟಿ ನೀಡುತ್ತೇನೆ ಎಂಬ ಮಾಹಿತಿಯನ್ನು ಹಣಕಾಸು ಸಚಿವೆ ಇದೇ ಸಂದರ್ಭದಲ್ಲಿ ನೀಡಿದರು.

Advertisement

ಆ ಭಾಗದ ರೈತರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಅವರೊಂದಿಗೆ ಚರ್ಚಿಸುವುದಾಗಿ ಮತ್ತು ಅಗತ್ಯಬಿದ್ದಲ್ಲಿ ರೈತರ ಸಂಘವನ್ನು ಸ್ಥಾಪಿಸಲು ನೆರವು ಒದಗಿಸುವುದಾಗಿ ನಬಾರ್ಡ್ ಅಧ್ಯಕ್ಷರೂ ಸಹ ಇದೇ ಸಂದರ್ಭದಲ್ಲಿ ನುಡಿದರು. ಇದರಲ್ಲಿ ಈ ಭಾಗದ ರೈತರಿಗೆ ಅಗತ್ಯ ಹಣಕಾಸು ನೆರವನ್ನು ಒದಗಿಸುವುದು. ಅಲ್ಪ ಕಾಲೀನ ಮತ್ತು ದೀರ್ಘ ಕಾಲೀನ ಸಾಲ ಸೌಲಭ್ಯಗಳ ಒದಗಿಸುವಿಕೆಯೂ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next