Advertisement

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿ

09:09 AM Apr 27, 2019 | Hari Prasad |

ವಾರಣಾಸಿ: ಉತ್ತರ ಪ್ರದೇಶದ ದೇವಳಗಳ ನಗರಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸತ್ತಿಗೆ ಆಯ್ಕೆ ಬಯಸಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ವಾರಣಾಸಿಯಲ್ಲಿರುವ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಮೋದಿ ತಮ್ಮ ಉಮೇದುವಾರಿಕೆಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಿದರು.

Advertisement

ಮೋದಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವು ಬಿಜೆಪಿ ನೇತೃತ್ವದ ಎನ್‌.ಡಿ.ಎ. ಮೈತ್ರಿಕೂಟದ ಬಲಪ್ರದರ್ಶನಕ್ಕೂ ಸಾಕ್ಷಿಯಾಯಿತು. ಮೋದಿ ನಾಮಪತ್ರ ಸಲ್ಲಿಕೆಗೆ ಪಕ್ಷದ ಹಿರಿಯ ನಾಯಕರು ಮಾತ್ರವಲ್ಲದೇ ಮೈತ್ರಿಕೂಟದ ಪ್ರಮುಖ ನಾಯಕರೂ ಉಪಸ್ಥಿತರಿದ್ದುದು ವಿಶೇಷವಾಗಿತ್ತು.


ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಸಂಯುಕ್ತ ಜನತಾ ದಳ ಮುಖಂಡ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಶಿರೋಮಣಿ ಅಕಾಲಿ ದಳದ ಮುಖಂಡ ಪ್ರಕಾಶ್‌ ಸಿಂಗ್‌ ಬಾದಲ್‌, ಶಿವಸೇನಾ ಮುಖ್ಯಸ್ಥ ಉದ್ಭವ್‌ ಠಾಕ್ರೆ, ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೈಫ‌ೂ ರಿಯೋ, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್‌ ವಿಲಾಸ್‌ ಪಾಸ್ವಾನ್‌, ತಮಿಳುನಾಡಿನ ಉಪಮುಖ್ಯಮಂತ್ರಿ ಒ. ಪನೀರ್‌ ಸೆಲ್ವಂ, ಅಪ್ನಾ ದಳ (ಸೋನೇಲಾಲ್‌) ಮುಖ್ಯಸ್ಥ ಅನುಪ್ರಿಯಾ ಪಟೇಲ್‌, ಮೇಘಾಲಯ ಮುಖ್ಯಮಂತ್ರಿ ಕೋನ್ರಾಡ್‌ ಸಂಗ್ಮಾ ಸಹಿತ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕೇಂದ್ರ ಸಚಿವರಾಗಿರುವ ರಾಜನಾಥ್‌ ಸಿಂಗ್‌, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ ಮೊದಲಾದವರು ಮೋದಿ ಅವರ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಿದ್ದರು.


ಎನ್‌.ಡಿ.ಎ. ನಾಯಕರು ಶುಕ್ರವಾರ ಬೆಳಿಗ್ಗೆ ವಾರಣಾಸಿಯಲ್ಲಿ ಉಪಹಾರ ಚರ್ಚೆಯನ್ನೂ ಸಹ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಕಾಲಿದಳ ಮುಖಂಡ ಮತ್ತು ಪಂಜಾಬ್‌ ಮಾಜೀ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ನಾಮಪತ್ರ ಸಲ್ಲಿಕೆಗೂ ಮುನ್ನ ಮೋದಿ ವಾರಣಾಸಿಯಲ್ಲಿರುವ ಕಾಲಭೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಾಥ್‌ ನೀಡಿದ್ದರು. ಮೋದಿ ಅವರ ನಾಮಪತ್ರಕ್ಕೆ ಅನ್ನಪೂರ್ಣ ಎಂಬ ಮಹಿಳೆ ಸಾಕ್ಷಿದಾರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next