Advertisement

ಯೋಧರ ಜತೆ ಪ್ರಧಾನಿ ನರೇಂದ್ರ ಮೋದಿ ಹಬ್ಬ

06:00 AM Nov 08, 2018 | Team Udayavani |

ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರೊಂದಿಗೆ ಆಚರಿಸಿದರು. ಕಳೆದ ವರ್ಷ ತಮ್ಮಿಂದ ಉದ್ಘಾಟನೆಗೊಂಡಿದ್ದ ಉತ್ತರಾಖಂಡದ ಕೇದಾರನಾಥದಲ್ಲಿ ನಿರ್ಮಾಣವಾಗುತ್ತಿರುವ ಕೇದಾರಪುರಿಯ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಲು ತೆರಳಿದ್ದ ಮೋದಿ, ಮಾರ್ಗ ಮಧ್ಯೆ, ಭಾರತ-ಚೀನಾ ಗಡಿಯಲ್ಲಿರುವ ಹರ್ಷಿಲ್‌ ಪ್ರಾಂತ್ಯದಲ್ಲಿಳಿದು ಸುಮಾರು 1.15 ಗಂಟೆ ಕಾಲ ಯೋಧರೊಂದಿಗೆ ಕಳೆದರು. ಇದೇ ವೇಳೆ, ಈ ದೀಪಾವಳಿ ನಿಮಗೆ (ಸೈನಿಕರಿಗೆ) ಸಂತೋಷ, ಆರೋಗ್ಯ, ಸಮೃದ್ಧಿಯನ್ನು ತರಲಿ ಎಂದು ಅವರು ಹಾರೈಸಿದರು.

Advertisement

ಯೋಧರೊಂದಿಗೆ ಆಚರಣೆ
“”ನೀವು ಭಾರತದ ಯಾವುದೋ ಒಂದು ಮೂಲೆಯನ್ನು ಕಾಯುತ್ತಿಲ್ಲ. ಗಡಿ ಕಾಯುವ ಮೂಲಕ 125 ಕೋಟಿ ಭಾರತೀಯರನ್ನು ಹಾಗೂ ಅವರ ಜೀವನವನ್ನು ನೀವು ಸಂರಕ್ಷಿಸುತ್ತಿದ್ದೀರಿ” ಎಂದು ನುಡಿದರು. ಸೈನಿಕರು ಹಚ್ಚಿಟ್ಟ ಹಣತೆಗಳನ್ನು ಉಲ್ಲೇಖೀಸಿದ ಮೋದಿ, ದೀಪದ ಬೆಳಕು ಸುತ್ತಲಿನ ವಿಶ್ವದಲ್ಲಿ ಹರಡುವಂತೆ ನೀವು (ಸೈನಿಕರು) ಎಲ್ಲೆಡೆಯಲ್ಲೂ ನಿರ್ಭೀತಿಯನ್ನು ಪಸರಿಸುತ್ತೀರಿ ಎಂದು ಹೊಗಳಿದರು. ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ವರ್ಷ ದೀಪಾವಳಿಯಲ್ಲಿ ತಾವು ಸೈನಿಕರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

ಇದೇ ವೇಳೆ, ಸೈನಿಕರ ಅಗತ್ಯತೆಗಳ ಬಗ್ಗೆ ತಾವು ಗಂಭೀರ ಚಿಂತನೆ ನಡೆಸುವುದಾಗಿ ತಿಳಿಸಿದ ಅವರು, “”ಅನೇಕ ಸರ್ಕಾರಗಳು ಬಂದವು, ಹೋದವು. ಆದರೆ, ತಾವು ಸೈನಿಕರ ಬೇಕು, ಬೇಡಗಳಿಗೆ ಹೊಂದಿರುವ ಗಂಭೀರ ಕಾಳಜಿಯಿಂದ “ಏಕ ಶ್ರೇಣಿ, ಏಕ ಪಿಂಚಣಿ’ (ಒಆರ್‌ಒಪಿ) ಯೋಜನೆ ಜಾರಿಗೆ ಬಂತು ಎಂದರು. ಈ ಯೋಜನೆಗೆ ಅಗತ್ಯವಿದ್ದ 12,000 ಕೋಟಿ ರೂ.ಗಳನ್ನು ನೀಡುವ ಬಗ್ಗೆ ಯಾವುದೇ ಅಳುಕಿಲ್ಲದೆ ನಿರ್ಧಾರ ಕೈಗೊಳ್ಳಲಾಯಿತು. ಯೋಜನೆ ಜಾರಿಗೆ ಬಂದಾಗಿನಿಂದ ಈವರೆಗೆ 11,000 ಕೋಟಿ ರೂ. ಹಣವು ಯೋಧರಿಗೆ ಸಂದಾಯವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ” ಎಂದರು.

ಶಿಸ್ತು, ಕ್ಷಮತೆಯ ವಿಚಾರದಲ್ಲಿ ವಿಶ್ವದಲ್ಲೇ ಹೆಸರುವಾಸಿಯಾಗಿರುವ ಭಾರತೀಯ ಸೈನಿಕರ ಕಾರ್ಯತತ್ಪರತೆಯನ್ನು ಹೆಚ್ಚಿಸಲು ಸೈನ್ಯದ ಶಸ್ತ್ರಾಸ್ತ್ರಗಳನ್ನು ಆಧುನಿಕರಣಗೊಳಿಸುವ ಕೆಲಸಕ್ಕೆ ಕೈ ಹಾಕಲಾಗಿದೆ ಎಂದೂ  ವಿವರಿಸಿದರು. ಸೈನಿಕರೊಂದಿಗಿನ ಮಾತುಕತೆಯ ನಂತರ, ಮೋದಿ ಅವರು ಹರ್ಷಿಲ್‌ನಲ್ಲಿ ಹರಿಯುವ ಗಂಗಾ ನದಿಯ ಉಪನದಿಯಾದ ಬಾಗೀರಥಿಗೆ ಪೂಜೆ ಸಲ್ಲಿಸಿ, ನದಿಯ ಪಕ್ಕದ ಬಗೋರಿ ಎಂಬ ಹಳ್ಳಿಯ ಜನರನ್ನು ಭೇಟಿಯಾದರು.

ಕೇದಾರಪುರಿ ವೀಕ್ಷಣೆ
2013ರ ಮಹಾ ಜಲಪ್ರಳಯದಿಂದಾಗಿ ನಾಶವಾಗಿದ್ದ ಕೇದಾರನಾಥ ಪ್ರಾಂತ್ಯದಲ್ಲಿ ಮರುನಿರ್ಮಾಣವಾಗುತ್ತಿರುವ ಕೇದಾರಪುರಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಇದಕ್ಕೂ ಮೊದಲು, ಕೇದಾರನಾಥ ದೇಗುಲಕ್ಕೆ ತೆರಳಿದ ಮೋದಿ ಗರ್ಭಗುಡಿಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದರು. ಪ್ರಧಾನ ಅರ್ಚಕರಾದ ಟಿ. ಗಂಗಾಧರ ಲಿಂಗ್‌ ಹಾಗೂ ಮೋದಿಯವರ ತೀರ್ಥ ಪುರೋಹಿತರಾದ ಪ್ರವೀಣ್‌ ತಿವಾರಿ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ ಭಾಗಿಯಾಗಿದ್ದರು. ಪೂಜೆಯ ನಂತರ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದ ಅವರು, ಸುತ್ತಲಿನ ಹಿಮಚ್ಛಾದಿತ ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಶ್ಲಾ ಸಿದರು. ಆನಂತರ, ಫೋಟೋ ಗ್ಯಾಲರಿ ವೀಕ್ಷಿಸಿದರು.

Advertisement

ರಕ್ಷಣಾ ಸಚಿವರ ಆಚರಣೆ:
ಅರುಣಾಚಲ ಪ್ರದೇಶದ ಬಳಿಯಿರುವ ಭಾರತ-ಚೀನಾ ಗಡಿ ಪ್ರದೇಶದ ರೋಚಮ್‌ ಹಾಗೂ ಹಯುಲಿಯಾಂಗ್‌ ಸೇನಾ ನೆಲೆಗಳಿಗೆ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಅಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.

ವಿಶ್ವಸಂಸ್ಥೆಗೆ ಭಾರತ ಧನ್ಯವಾದ
ಈ ಬಾರಿ, ದೀಪಾವಳಿ ಪ್ರಯುಕ್ತ ತನ್ನ ಲಾಂಛನದಡಿ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ವಿಶ್ವಸಂಸ್ಥೆಗೆ ಭಾರತ ಧನ್ಯವಾದ ಅರ್ಪಿಸಿದೆ. ಒಂದು ಹಾಳೆಯಲ್ಲಿ 20 ಚೀಟಿಗಳಿದ್ದು, ಇವುಗಳ ಬೆಲೆ ರೂ. 83. ಇದೇ ವೇಳೆ, ದಕ್ಷಿಣ ಲಂಡನ್‌ನ ಕ್ರೊಯxನ್‌ ಉಪನಗರದಲ್ಲಿ ಬುಧವಾರ ದೀಪಾವಳಿ ಪ್ರಯುಕ್ತ ಕಾಳಿ ಪೂಜೆ ನಡೆಸಲಾಯಿತು.

ಇಸ್ರೇಲ್‌ ಪ್ರಧಾನಿ ಶುಭಾಶಯ
ಹಬ್ಬದ ಹಿಂದಿನ ದಿನ ರಾತ್ರಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು, ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಹಿಂದಿ ಭಾಷೆಯಲ್ಲಿ ದೀಪಾವಳಿ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. “ನನ್ನ ಸ್ನೇಹಿತ ಮೋದಿಯವರಿಗೆ ದೀಪಾವಳಿ ಶುಭಾಶಯ ಸಲ್ಲಿಸಲು ಬಯಸುತ್ತೇನೆ. ಬೆಳಕಿನ ಹಬ್ಬವು ನಿಮಗೆ (ಮೋದಿಯವರಿಗೆ) ಸುಖ, ಸಮೃದ್ಧಿ ತರಲಿ’ ಎಂದು ಹಾರೈಸಿದ್ದರು. ಇದಕ್ಕೆ, ಹೀಬ್ರೂ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದ ಮೋದಿ, “ನನ್ನ ಸ್ನೇಹಿತ ಬಿಬಿ, ದೀಪಾವಳಿ ಶುಭಾಶಯಕ್ಕಾಗಿ ಧನ್ಯವಾದ’ ಎಂದಿದ್ದರು. ಸೌದಿ ಅರೇಬಿಯಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ನಾಯಕರು ಭಾರತೀಯರಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next