ಪ್ರಯಾಗರಾಜ್: ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಮಹಾರಾಜ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಯಾಗರಾಜ್ ನ ಮಹಾಂತ್ ಬಘಂಬರಿ ಗಡ್ಡಿ ಆಶ್ರಮದಲ್ಲಿ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಪ್ರಾರಂಭದಲ್ಲಿ ಇವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದರ ಪ್ರಕಾರ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ ಎಂದು ಪ್ರಯಾಗರಾಜ್ ಪೊಲೀಸರು ಹೇಳಿದ್ದಾರೆ.
ನರೇಂದ್ರ ಗಿರಿ ತಂಗಿದ್ದ ಕೋಣೆ ಒಳಗಿನಿಂದ ಲಾಕ್ ಮಾಡಲಾಗಿತ್ತು. ಬಾಗಿಲು ಮುರಿದು ಒಳಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ದೊರೆತ ಡೆತ್ ನೋಟ್ ನಲ್ಲಿ ಇನ್ಮುಂದೆ ಮಠದ ನೇತೃತ್ವ ಯಾರು ವಹಿಸಿಕೊಳ್ಳಬೇಕು ಹಾಗೂ ಆಶ್ರಮದಲ್ಲಿ ಮುಂದೆ ನಡೆಯಬೇಕಾದ ಕೆಲಸಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
7-8 ಪುಟಗಳಿರುವ ಡೆತ್ ನೋಟ್ ನಲ್ಲಿ ಆನಂದ್ ಗಿರಿ ಸೇರಿದಂತೆ ಹಲವು ಶಿಷ್ಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಆಶ್ರಮಕ್ಕೆ ಸಂಬಂಧಪಟ್ಟಂತೆ ಕೆಲವೊಂದು ವಿಚಾರಗಳಿಂದ ನರೇಂದ್ರ ಗಿರಿ ಮಹಾರಾಜ್ ಅಸಮಾಧನಗೊಂಡಿದ್ದರು ಎನ್ನುವ ವಿಚಾರ ಡೆತ್ ನೋಟ್ ನಿಂದ ಬೆಳಕಿಗೆ ಬಂದಿದೆ. ಇದುವರೆಗೆ ಸ್ವಾಭಿಮಾನದಿಂದ ಬದುಕಿದ್ದೆ ಆದರೆ,ಅದು ಈಗ ಸಾಧ್ಯವಾಗುತ್ತಿಲ್ಲ ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ.
ನರೇಂದ್ರ ಗಿರಿಯ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.