Advertisement

ನರೇಗಲ್ಲ ಉರ್ದು ಶಾಲಾ ಕಟ್ಟಡ ಶಿಥಿಲ!

04:00 PM Dec 22, 2018 | |

ನರೇಗಲ್ಲ: ಪಟ್ಟಣದ ನಾಗರಕೆರೆಯ ದಂಡೆಯ ಮೇಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು, ಭಯದ ವಾತಾವರಣದಲ್ಲಿ ಪಾಠ ಕೇಳುವಂತಾಗಿದೆ.

Advertisement

ಶಾಲಾ ಮೇಲ್ಛಾವಣಿಯಿಂದ ಸಿಮೆಂಟ್‌ ಮರಳು ಉದುರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಪಾಠ ಮಾಡುವ ವೇಳೆ ಶಿಕ್ಷಕರು ಕೂಡ ಸಾಕಷ್ಟು ಪ್ರಮಾಣದಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ. ಒಂದೆಡೆ ಬೋಧನೆಮತ್ತೊಂದೆಡೆ ಮಕ್ಕಳಿಗೆ ಯಾವುದೇ ರೀತಿಯಿಂದ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ತೀವ್ರ ನಿಗಾ ಕೂಡ ವಹಿಸುವಂತಾಗಿದೆ. ಇಲ್ಲಿ 1 ರಿಂದ 8ನೇ ತರಗತಿ ನಡೆಯುತ್ತಿದ್ದು, ಒಟ್ಟು ಮಕ್ಕಳ ಸಂಖ್ಯೆ 61ಕ್ಕೂ ಅಧಿಕ ಮಕ್ಕಳಿದ್ದಾರೆ. ಇಲ್ಲಿ 6 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸೂಕ್ತ ಸೌಲಭ್ಯ ಇಲ್ಲದ ಪರಿಣಾಮ ಅವರು ಪರದಾಡುವಂತಾಗಿದೆ.

ಈ ಶಾಲೆಯ 4 ಕೋಣೆಗಳು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿವೆ. ಕೋಣೆಗಳಲ್ಲಿ 4 ರಿಂದ 5 ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಾರೆ. ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ಬರುತ್ತಿದೆ. ಹೀಗಾಗಿ ಅಧಿಕಾರಿಗಳು ಪಟ್ಟಣದ ಮಕ್ಕಳ ಪರಿಸ್ಥಿತಿ ಅರಿತು ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಈಗಾಗಲೇ ಮುಂದಾಗಬೇಕಿತ್ತು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ನಿಷ್ಕಾಳಜಿ ವಹಿಸುತ್ತಿರುವುದು ಎಷ್ಟೊಂದು ಸಮಂಜಸವಾಗಿದೆ ಎಂದು ಪ್ರಶ್ನೆ ಉದ್ಬವಿಸಿದೆ.

ಶಾಲೆಯ ಸುತ್ತಲೂ ಅಕ್ರಮ ಚಟುವಟಿಕೆ, ಕಸಕಡ್ಡಿ ಹಾಕಲಾಗುತ್ತಿದೆ. ಇದರಿಂದ ದುರ್ವಾಸನೆ ಬರುತ್ತದೆ. ಹೀಗಾಗಿ ಶಿಕ್ಷಕರು ಪಾಠ ಮಾಡಲು ಮತ್ತು ಮಕ್ಕಳಿಗೆ ಕೇಳದಂತಹ ಸ್ಥಿತಿ ಬಂದೊದಗಿದೆ. ಆದರೂ ಸಹ ಅನಿವಾರ್ಯವಾಗಿ ಎಲ್ಲವನ್ನು ಸಹಿಸಿಕೊಳ್ಳುವಂತಾಗಿದೆ. ಮಕ್ಕಳಿಗೆ ಶೌಚಾಲಯದ ಕೊರತೆ, ಆಟದ ಮೈದಾನವಿಲ್ಲದ ಕಾರಣ ಶಾಲೆಯ ಸಮೀಪವಿರುವ ಜಮೀನಿನಲ್ಲಿ ಆಟವಾಡುತ್ತಾರೆ. ಅಧ್ಯಯನ ಜತೆಗೆ ಕ್ರೀಡೆ ಕೂಡ ಬಹಳ ಮುಖ್ಯವಾಗಿದೆ. ಅದಕ್ಕಾಗಿ ಸುವ್ಯವಸ್ಥಿತವಾದ ಮೈದಾನ ಮಕ್ಕಳಿಗೆ ಅವಶ್ಯವಿದೆ.

ಶಾಲೆಯ ಕೋಣೆಗಳ ಮೇಲ್ಛಾವಣಿ ಸಿಮೆಂಟ್‌ ಸತ್ವ ಕಳೆದುಕೊಂಡು ಕಿತ್ತು ಬೀಳುತ್ತಿದೆ. ಕಬ್ಬಿಣದ ರಾಡುಗಳು ಹೊರಗೆ ಕಾಣುತ್ತಿವೆ. ಗೋಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. ಆತಂಕದಲ್ಲಿ ಮಕ್ಕಳ ಆಟ, ಪಾಠ ನಡೆದಿದೆ. ಈ ಶಾಲೆಯ ಕಟ್ಟಡವನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿ ಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ದಾದೇಸಾಬ ಹೊಸಮನಿ.

Advertisement

ಮಳೆ ಬಂದಾಗ ಅಪಾಯದ ಸಾಧ್ಯತೆ ಇಮ್ಮಡಿಯಾಗುತ್ತದೆ. ಮಳೆ ನೀರು, ಸೂರ್ಯನ ಕಿರಣಗಳು ಬಿರುಕು ಗೋಡೆಗಳ ಮೂಲಕ ನೇರವಾಗಿ ಕೋಣೆಗಳ ಒಳಗೆ ಬರುತ್ತದೆ. ಅಧಿ ಕಾರಿಗಳು ಹಾಗೂ ಜನಪ್ರತಿನಿಧಿ ಗಳ ಗಮನಕ್ಕೆ ಇದ್ದರೂ ಯಾರೊಬ್ಬರೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನುವ ಬೇಸರ ವ್ಯಕ್ತಪಡಿಸುತ್ತಾರೆ ಪಟ್ಟಣದ ನಿವಾಸಿಗಳು.

ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡವನ್ನು ಪ್ರಾರಂಭ ಮಾಡಬೇಕು. ಒಂದೆಡೆ ಕೋಣೆಗಳ ಕೊರತೆ, ಮತ್ತೊಂದೆಡೆ ಉದುರುತ್ತಿರುವ ಮೇಲ್ಛಾವಣಿ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಾದೇಸಾಬ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಶಾಲೆಯ ಕಟ್ಟಡ ತೆರವುಗೊಳಿಸಿ ಶೀಘ್ರದಲ್ಲಿಯೇ ನೂತನ ಕಟ್ಟಡಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು.
 ಎನ್‌. ನಂಜುಡಯ್ಯ,
ಕ್ಷೇತ್ರ ಶಿಕ್ಷಣಾಧಿಕಾರಿ.

ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next