ನರೇಗಲ್ಲ: ಕೆರೆಕಟ್ಟೆಗಳು ಗ್ರಾಮೀಣ ಪ್ರದೇಶದ ಜನರ ಜೀವಾಳವಾಗಿದ್ದು, ಹಿಂದೆ ರಾಜ ಮಹಾರಾಜರು ತಮ್ಮ ಸಾಧನೆಗಳ ಗುರುತಿಗಾಗಿ, ಯುದ್ಧದಲ್ಲಿ ಗೆದ್ದ ವಿಜಯದ ಸಂಕೇತಕ್ಕಾಗಿ ಗ್ರಾಮಗಳಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದನ್ನು ಇತಿಹಾಸ ಪುಟಗಳಲ್ಲಿ ಕಾಣುತ್ತೇವೆ. ಅಂತಹ ಮಹತ್ವದ ಸಾಧನೆಯತ್ತ ಇಲ್ಲಿನ ರೈತ ಸಮೂಹ ಸಾಗಿದೆ.
ಹಾಲಕೆರೆಯ ಡಾ| ಅಭಿನವ ಅನ್ನದಾನ ಸ್ವಾಮೀಜಿಗಳು ಒಂದು ಲಕ್ಷ ರೂ. ದೇಣಿಗೆ ನೀಡುವದರ ಮೂಲಕ ಹಿರೇಕೆರೆ ಹೊಳೆತ್ತುವ ಅಭಿವೃದ್ಧಿ ಕಾರ್ಯಕ್ಕೆ ನೆಲ ಜಲ ಸಂರಕ್ಷಣೆ ಸಮಿತಿಯೊಂದಿಗೆ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಕೂಡ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಸುಮಾರು 30 ಎಕರೆ ವಿಸ್ತರಣೆ ಹೊಂದಿದ ಐತಿಹಾಸಿಕ ಹಿರೇಕೆರೆ ಈವರೆಗೆ ಅಭಿವೃದ್ಧಿ ಕಾಣದೆ, ಮೃತಪಟ್ಟ ಪ್ರಾಣಿಗಳು ಹಾಗೂ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ಬಿಸಾಡಲಾಗುತ್ತಿತ್ತು. ಇದರಿಂದ ಕೆರೆ ತನ್ನ ಸ್ಥಾನ ಕಳೆದುಕೊಂಡು ತಿಪ್ಪೆಯಾಗಿ ಪರಿವರ್ತನೆಯಾಗಿತ್ತು. ಅದರ ಅಭಿವೃದ್ಧಿಗಾಗಿ ಹೊಳೆತ್ತುವ ಅಭಿವೃದ್ಧಿ ಸಮಿತಿ ರಚಿಸುವ ಮೂಲಕ ಕೆರೆ ಅಭಿವೃದ್ಧಿ ಕೈಗೊಂಡಿರುವುದು ರೈತನಿಗೆ ನೆರವಾಗಲಿದೆ.
ಪ್ರಸಕ್ತ ವರ್ಷ ಎದುರಾದ ಭೀಕರ ಬರದ ಬವಣೆಯಿಂದ ಕಂಗಾಲಾದ ನರೇಗಲ್ಲ ಪಟ್ಟಣದ ರೈತರನ್ನು ಒಗ್ಗೂಡಿಸುವ ಮೂಲಕ ಹಾಲಕೆರೆಯ ಡಾ| ಅಭಿನವ ಅನ್ನದಾನ ಸ್ವಾಮೀಜಿ ಮತ್ತು ನೆಲ ಜಲ ಸಂರಕ್ಷಣೆ ಸಮಿತಿ ವತಿಯಿಂದ ಜರುಗಿದ ರೈತರ ಸಭೆ ಕೈಗೊಂಡ ನಿರ್ಧಾರ ಸಾರ್ಥಕತೆ ಮೂಡಿಸಿದೆ. ಕೆರೆ ಮಣ್ಣನ್ನು ರೈತರೇ ತೆಗೆದು ಕೊಂಡು ಹೋಗಬೇಕು. ರೈತರು ತರುವ ಟ್ರ್ಯಾಕ್ಟರ್ ತುಂಬಿಸುವ ಜವಾಬ್ದಾರಿ ಸಮಿತಿ ಹೊತ್ತಿದೆ. ರೈತರಿಂದ ಒಂದು ಟ್ರ್ಯಾಕ್ಟರ್ ಮಣ್ಣಿಗೆ ಪಡೆಯುವ 70 ರೂ.ಗಳಲ್ಲಿ ಕೆರೆ ಮಣ್ಣು ಟ್ರ್ಯಾಕ್ಟರಿಗೆ ತುಂಬಿಸುವ ಜೆಸಿಬಿ ಯಂತ್ರದ ಖರ್ಚು ನಿರ್ವಹಿಸುತ್ತದೆ. ಎರಡು ದಿನಗಳಿಂದ ಹೂಳು ತೆಗೆಯುವ ಕಾರ್ಯ ತೀವ್ರಗೊಂಡಿದೆ. ನೂರಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಮಣ್ಣನ್ನು ರೈತರು ತೆಗೆದುಕೊಂಡಿದ್ದಾರೆ. ನರೇಗಲ್ಲ ಸೇರಿದಂತೆ ಕೋಡಿಕೊಪ್ಪ, ಕೋಚಲಾಪುರ, ಮಲ್ಲಾಪುರ, ದ್ಯಾಂಪುರ, ತೋಟಗಂಟಿ ಗ್ರಾಮದಿಂದ ರೈತರು, ಕೆರೆ ಮಣ್ಣಿಗಾಗಿ ಕಾಯ್ದು ನಿಂತು ಕೊಂಡೊಯ್ಯುತ್ತಿದ್ದಾರೆ.
ಕೆರೆ ಮಣ್ಣು ಹೊಲಕ್ಕೆ ಹಾಕಿದರೇ ಫಲವತ್ತತೆ ಹೆಚ್ಚುತ್ತದೆ. ಉತ್ತಮ ಇಳುವರಿ ಪಡೆಯಬಹುದು. ಹೀಗಾಗಿ ಕೆರೆ ಮಣ್ಣು ಪಡೆದುಕೊಳ್ಳುತ್ತಿದ್ದೇವೆ. ಹಿರೇಕೆರೆ ಮಣ್ಣಿನಲ್ಲಿ ಗೊಬ್ಬರದ ಶಕ್ತಿಯಿದೆ. ಇಂತಹ ಮಣ್ಣು ಬೇರೆ ಕೆರೆಯಲ್ಲಿ ಸಿಗುವುದಿಲ್ಲ. ಈ ಕೆರೆ ಹೂಳು ತೆಗೆಯುವ ಸುದ್ದಿ ಕೇಳಿ ಬಾಡಿಗೆ ಟ್ರ್ಯಾಕ್ಟರ್ ಮೂಲಕ ಮಣ್ಣು ಕೊಂಡೊಯ್ಯುತ್ತಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ.
ಜ್ಞಾನ ಪ್ರಸಾರ, ದಾಸೋಹ ಮಾಡುವುದು, ಮಂತ್ರಪಠಿಸುವ ಕತೆಗೆ ಗ್ರಾಮಾಭಿವೃದ್ಧಿಗಳ ಚಿಂತನೆ, ಕಾಲಕ್ಕೆ ತಕ್ಕಂತೆ ಬದಲಾದ ವಿಷಯಗಳ ಕುರಿತು ಚಿಂತನಾಶಕ್ತಿ ಮಠಮಂದಿರಗಳು ಜಾಗೃತಿ ಮೂಡಿಸುವ ಕಾಯಕಕ್ಕೆ ಇಳಿಯಬೇಕು.
ಡಾ| ಅಭಿನವ ಅನ್ನದಾನ
ಸ್ವಾಮೀಜಿ, ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ
ಕೆರೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರವಿದ್ದು, ಅದರ ಅಭಿವೃದ್ಧಿ ಕಾರ್ಯದಲ್ಲಿ ಕಡಿಮೆಯಾಗಬಹುದಾದ ಅನುದಾನವನ್ನು ನೀಡಲು ಬದ್ಧನಾಗಿದ್ದೇನೆ.,
ಕಳಕಪ್ಪ ಬಂಡಿ, ಶಾಸಕ
ಸಿಕಂದರ ಎಂ. ಆರಿ