ಚಿತ್ರದುರ್ಗ: ಕೋವಿಡ್ ಸಂಕಷ್ಟಕ್ಕೆ ತುತ್ತಾಗಿ ಊರು ಸೇರಿದವರಿಗೆ ಬದುಕು ಕಟ್ಟಿಕೊಡುವಲ್ಲಿ ನರೇಗಾ ಯೋಜನೆಯಡಿಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ವಿಶೇಷವಾಗಿ ರೈತರ ಜಮೀನುಗಳಲ್ಲಿ ಬದು ನಿರ್ಮಾಣಕ್ಕಾಗಿ ನಡೆದ ಅಭಿಯಾನ ಜಿಲ್ಲೆಯ ಮಟ್ಟಿಗೆ ಯಶಸ್ವಿಯಾಗಿದೆ. ಬದು ನಿರ್ಮಾಣದ ಮೂಲಕ ರೈತರಿಗೆ, ಕೂಲಿ ಕಾರ್ಮಿಕರರಿಗೆ ಉದ್ಯೋಗಒದಗಿಸುವುದು ಒಂದು ಕಡೆಯಾದರೆ, ಮುಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಅಂತರ್ಜಲ ಇಂಗಿಸುವ ಕೆಲಸವೂ ಆಗಿದೆ.
ಈಗ ಅದೇ ನರೇಗಾ ಯೋಜನೆಬಳಸಿಕೊಂಡು ಶಾಲಾ ಮಕ್ಕಳಿಗೆ ಪೌಷ್ಟಿಕಆಹಾರ ಒದಗಿಸಲು ಆರ್‌ಡಿಪಿಆರ್‌ಇಲಾಖೆ ಮುಂದಾಗಿದ್ದು, ಜಿಲ್ಲೆಯಲ್ಲಿಅಕ್ಟೋಬರ್ 2 ರಿಂದ ಶಾಲೆ, ವಿದ್ಯಾರ್ಥಿನಿಲಯಗಳ ಆವರಣಗಳಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡುವ ಕೆಲಸಕ್ಕೆ ಜಿಲ್ಲಾ ಪಂಚಾಯಿತಿ ಕೈ ಹಾಕಿದೆ.
ಜಿಲ್ಲೆಯ ಪ್ರಮುಖ ನರ್ಸರಿ ಕೇಂದ್ರಗಳಿಂದ ಪೇರಳೆ, ನಿಂಬೆ, ನುಗ್ಗೆ, ಸಪೋಟಾ, ಸೇಬು, ಮೋಸಂಬಿ ಸೇರಿದಂತೆತರಹೇವಾರಿ ಸಸಿಗಳನ್ನು ತಂದು ನಾಟಿ ಮಾಡಿ ಬೆಳೆಸುವ ಮೂಲಕ ಮಕ್ಕಳಿಗೆ ಶಾಲಾ ಆವರಣದಲ್ಲೇ ಪೌಷ್ಟಿಕವಾದ ಹಣ್ಣುಗಳನ್ನು ಒದಗಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ 35ಸಾವಿರ ರೂ.ಗಳನ್ನು ಪ್ರತಿ ಶಾಲೆಯ ಪೌಷ್ಟಿಕ ತೋಟಕ್ಕಾಗಿ ಒದಗಿಸಲಾಗುತ್ತಿದೆ. ಜಿಲ್ಲೆಯ 189 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಪಂಗೆ 10 ಪೌಷ್ಟಿಕ ತೋಟಗಳನ್ನು ಒದಗಿಸಲಾಗಿದೆ. ಇದರಲ್ಲಿ ಶಾಲೆ, ಅಂಗನವಾಡಿ ಹಾಗೂ ವಿದ್ಯಾರ್ಥಿ ನಿಲಯಗಳಿದ್ದರೆ ಅಲ್ಲಿ ಕೈ ತೋಟಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು.
ಇಂಗು ಗುಂಡಿಗೆ ಗುರಿ ಮೀರಿದ ಸಾಧನೆ: ಗ್ರಾಮೀಣ ಭಾಗದ ಮನೆಗಳಆಸುಪಾಸಿನಲ್ಲಿ ಪಾತ್ರೆ ತೊಳೆದ, ಸ್ನಾನದಮನೆಯ ನೀರು ಬೀದಿಗೆ ಹರಿಯುವುದು ಸಾಮಾನ್ಯ. ಇದರಿಂದ ಸಾಕಷ್ಟು ರೋಗರುಜಿನಗಳು ಆವರಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನರೇಗಾದಡಿ ವೈಯಕ್ತಿಕವಾಗಿ ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ 189 ಗ್ರಾಪಂಗಳಿಗೆ ತಲಾ 50 ಗುರಿ ನೀಡಲಾಗಿತ್ತು. ಆದರೆ, ಗುರಿಮೀರಿದ ಸಾಧನೆಯಾಗಿದ್ದು,ಈಗಾಗಲೇ ಹತ್ತು ಸಾವಿರ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ.
-ತಿಪ್ಪೇಸ್ವಾಮಿ ನಾಕೀಕೆರೆ