ರಾಯಚೂರು: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ವಿವಿಧ ಗ್ರಾಮ ಪಂಚಾಯಿತಿಗಳು ಕೈಗೊಂಡು ಹಲವು ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಗುರುವಾರ ಪರಿಶೀಲಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿ ವೀಕ್ಷಿಸಿ ಕೆಲವು ಸಲಹೆ ಹಾಗೂ ಸೂಚನೆ ನೀಡಿದರು.
ಬೆಳಗ್ಗೆ 8:00ಕ್ಕೆ ರಾಯಚೂರು ತಾಲೂಕಿನ ಗಾಣಧಾಳ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಮಾಡುತ್ತಿದ್ದ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿ ವೀಕ್ಷಿಸಿದರು.
ನಂತರ ರಾಯಚೂರು ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ತುಂಗಭದ್ರಾ ನದಿ ಪ್ರವಾಹ ತಡೆಗಟ್ಟಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಸಂರಕ್ಷಣ ತಡೆಗೋಡೆ ವೀಕ್ಷಿಸಿದರು. ಬಳಿಕ ಯರಗೇರಾ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರೌಢಶಾಲೆಯಲ್ಲಿ ಮಳೆ ನೀರು ಕೋಯ್ಲು ನಿರ್ಮಾಣದ ಯೋಜನೆ ವೀಕ್ಷಿಸಿದರು. ರಾಯಚೂರು ತಾಲೂಕಿನ ನೆಲೆಹಾಳ ಗ್ರಾಮದ ನಜರ್‌ಮೀಯ ಎಂಬುವವರ ಹೊಲದ ಹತ್ತಿರ ನರೇಗಾ ಯೋಜನೆಯಡಿ ಕೈಗೊಳ್ಳಲಾಗಿರುವ ಚೆಕ್ ಡ್ಯಾಂನ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು.
ತದನಂತರ ರಾಯಚೂರು ತಾಲೂಕಿನ ಚಿಕ್ಕಸುಗೂರಿನಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಪಂ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ| ಶಿವರಾಜ ಪಾಟೀಲ, ಬಸವನಗೌಡ ದದ್ದಲ್, ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಇದ್ದರು.