ಮಳವಳ್ಳಿ: ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಾಪಂ ಇಒ ರಾಮಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಕಾಯಕ ಬಂಧುಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಪಂ ಎಇಇ ಮಹದೇವಸ್ವಾಮಿ, ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಾಯಕ ಬಂಧುಗಳು, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ದೇವಿ ಕಿಡಿಕಾರಿದರು.
ಕೂಲಿ ನೀಡದೇ ಅಧಿಕಾರಿಗಳಿಂದ ನಿರ್ಲಕ್ಷ್ಯ: ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ನರೇಗಾ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಅಲ್ಲದೆ, ಎರಡು ತಿಂಗಳು ಕಳೆದರೂ ಕೆಲಸ ಮಾಡಿರುವ ಕೂಲಿಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿಲ್ಲ. ಜಿಪಂ ಎಇಇ ಅವರ ಇಲಾಖೆಯಿಂದ ನರೇಗಾ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಪಟ್ಟಿ ನೀಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ: ತಾಲೂಕಿನ ನೆಲಮಾಕನಹಳ್ಳಿ, ತಳಗವಾದಿ, ಹಾಡ್ಲಿ, ಪಂಡಿತಹಳ್ಳಿ, ದುಗ್ಗನಹಳ್ಳಿ, ಹಿಟ್ಟನಹಳ್ಳಿ ಕೊಪ್ಪಲು ಸೇರಿ ಹಲವು ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಸಮರ್ಪಕವಾಗಿ ಕೆಲಸ ನೀಡದೇ ಪಿಡಿಒಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕ್ರಿಯಾ ಯೋಜನೆ ಪಟ್ಟಿ ಸಿದ್ಧಪಡಿಸಲು ನರೇಗಾ ಅಧಿ ಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇದ್ದರಿಂದಾಗಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ, ಜೀವನ ನಡೆಸಲು ಕಷ್ಟಪಡುವಂತಾಗಿದೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಅಸಮಾಧಾನ: ಸಭೆಯಲ್ಲಿ ವಿವಿಧ ಕಾಯಕ ಬಂಧುಗಳು ಮಾತನಾಡಿ, ತಾಲೂಕಿನ ತಳಗವಾದಿ ಗ್ರಾಪಂನ ದೇವಿಪುರ ಗ್ರಾಮದಲ್ಲಿ ನರೇಗಾ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಎರಡು ತಿಂಗಳೂ ಕಳೆದರೂ ಕೆಲಸ ನೀಡಲ್ಲ. ಅಲ್ಲದೇ, ಯತ್ತಂಬಾಡಿ, ನೆಲಮಾಕನಹಳ್ಳಿ, ಸುಜ್ಜಲೂರು ಸೇರಿ ವಿವಿಧ ಗ್ರಾಪಂಗಳಲ್ಲಿ ಕೂಲಿಗಾಗಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಕೆಲಸ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚರ್ಚೆ ನಡೆಸಲಾಗುವುದು: ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ನರೇಗಾ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣದಿಂದಲೇ ಕೆಲಸ ನೀಡಲು ಅಧಿ ಕಾರಿಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೆ, ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಶುಕ್ರವಾರ ಎಲ್ಲಾ ಪಂಚಾಯ್ತಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಎಇಇ ಮಹದೇವಸ್ವಾಮಿ, ನರೇಗಾ ಯೋಜನಾಧಿಕಾರಿ ದೀಪು ಹಲವರಿದ್ದರು.