Advertisement

ನರೇಗಾ ಕಾರ್ಮಿಕರ ಬಾಕಿ ವೇತನ ನೀಡಲು ಒತ್ತಾಯ

12:49 PM Mar 17, 2022 | Team Udayavani |

ಚಿತ್ತಾಪುರ: ತಾಲೂಕಿನ ಇಂಗಳಗಿ, ನಾಲವಾರ, ತರಕಸಪೇಠ ಹಾಗೂ ವಿವಿಧ ಗ್ರಾಮಗಳಲ್ಲಿ ನರೇಗಾದಲ್ಲಿ ಕೆಲಸ ಮಾಡಿದ್ದರೂ ನಾಲ್ಕು ವಾರದಿಂದ ಅವರ ಖಾತೆಗೆ ಹಣ ಜಮೆ ಆಗಿಲ್ಲ ಅಲ್ಲದೇ ನಾಲವಾರ ಗ್ರಾಮದಲ್ಲಿ ಕಾರ್ಮಿಕರಿಗೆ ಕೂಲಿ ಕೆಲಸವನ್ನು ಗ್ರಾಪಂ ಅಧಿಕಾರಿಗಳು ನೀಡುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಯಬಣ್ಣ ಗೂಡುಬಾ ಆರೋಪಿಸಿದರು.

Advertisement

ತಾಪಂ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇಂಗಳಗಿ ಗ್ರಾಮದಲ್ಲಿ 1000 ಜನರು, ನಾಲವಾರ ಗ್ರಾಮದಲ್ಲಿ 1000 ಹಾಗೂ ತರ್ಕಸ್‌ಪೇಠದಲ್ಲಿ 400 ಜನ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾರ್ಮಿಕರು ನರೇಗಾದಲ್ಲಿ ಕೆಲಸ ಮಾಡಿದ್ದರೂ ಕಳೆದ ನಾಲ್ಕು ವಾರದಿಂದ ವೇತನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಪ್ರತಿ ಕಾರ್ಮಿಕ ಕುಟುಂಬಕ್ಕೂ ಕೆಲಸ ನೀಡುತ್ತೇವೆ ಎಂದು ಹೇಳಿ ದುಡಿದ ಕೂಲಿಯನ್ನು ನಿಗದಿತ ಸಮಯಕ್ಕೆ ನೀಡದೇ ಇರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಹೇಳಿದರು.

ನಾಲವಾರ ಗ್ರಾಮದಲ್ಲಿ ಕೆಲಸ ನೀಡುವಂತೆ ನಮೂನೆ-6 ತುಂಬಿದ್ದರೂ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಕೇಳಿದರೆ ಸಮುದಾಯ ಕಾಮಗಾರಿಗಳು ತಂತ್ರಾಂಶದಲ್ಲಿ ನೋಂದಣಿ ಆಗುತ್ತಿಲ್ಲ. ಇದರಿಂದ ಕೇವಲ ಬದು ನಿರ್ಮಾಣ ಕಾಮಗಾರಿಗೆ ಅವಕಾಶ ಇದೆ ಎನ್ನುತ್ತಾರೆ. ಆದರೆ ಬದು ನಿರ್ಮಾಣ ಕಾಮಗಾರಿಯಲ್ಲಿ 1000 ಜನ ಕಾರ್ಮಿಕರಿಗೆ ಕೆಲಸ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ತಾಪಂ ಇಒಗೆ ಮನವಿ ಸಲ್ಲಿಸಿದರು.

ಒಂದೇ ಜಾಬ್‌ಕಾರ್ಡನಲ್ಲಿ ಮೂರು, ನಾಲ್ಕು ಕುಟುಂಬಗಳ ಹೆಸರು ಸೇರ್ಪಡೆಯಾಗಿವೆ. ಇದನ್ನು ವಿಂಗಡಿಸಿ ಅರ್ಹ ಪಡಿತರ ಚೀಟಿ ಹೊಂದಿದ ಕುಟುಂಬಕ್ಕೆ ಪ್ರತ್ಯೇಕ ಜಾಬ್‌ಕಾರ್ಡ್‌ ನೀಡಬೇಕು. ಹೊಸ ಜಾಬ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೂ ಗ್ರಾಪಂಗಳು ನೀಡುತ್ತಿಲ್ಲ. ಹೀಗಾಗಿ ಅನೇಕ ಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತೆ ಆಗಿದೆ ಎಂದು ಹೇಳಿದರು. ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next