Advertisement

ನೂತನ ಪಿಡಿಒಗಳಿಗೆ ನರೇಗಾ ತರಬೇತಿ ಕಾರ್ಯಾಗಾರ

05:30 PM Aug 15, 2018 | Team Udayavani |

ಯಲಬುರ್ಗಾ: ಗ್ರಾಪಂ ಮಟ್ಟದಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಜನರ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಪಂನಲ್ಲಿ ಆಸ್ತಿ ಸೃಜನ ಮಾಡುವ ಯೋಜನೆಯಾಗಿದೆ. ಈ ಯೋಜನೆಯನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ನರೇಗಾ ಯೋಜನೆ ಮಾಹಿತಿ ವ್ಯವಸ್ಥೆ ನಿರ್ವಹಣಾ ಸಂಯೋಜನಕ ಬಸವರಾಜ ತೋಟದ ಹೇಳಿದರು.

Advertisement

ಪಟ್ಟಣದ ತಾಪಂ ಕಚೇರಿಯಲ್ಲಿ ಮಂಗಳವಾರ ನೂತನವಾಗಿ ಸರ್ಕಾರದಿಂದ ನೇಮಕಗೊಂಡ 9 ಜನ ಪಿಡಿಒಗಳಿಗೆ ನರೇಗಾ ಯೋಜನೆ ಅನುಷ್ಠಾನ ಕುರಿತು ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನೂತನ ಪಿಡಿಒಗಳು ಗ್ರಾಪಂ ಕಚೇರಿಗೆ ಬರುವ ಜನತೆಯೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ನರೇಗಾ ಯೋಜನೆಯ ತಾಂತ್ರಿಕ ತಂತ್ರಾಂಶಗಳ ಕುರಿತು ಪಿಡಿಒ, ಗ್ರಾಪಂ ಅಧ್ಯಕ್ಷ, ಡಾಟಾ ಎಂಟ್ರಿ ಆಫರೇಟರ್‌ ತಾಲೂಕು ತಾಂತ್ರಿಕ ಸಹಾಯಕರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದರೇ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು. ನರೇಗಾ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ಮಾಡಬಹುದಾಗಿದೆ. ಶಾಲಾ ಕಾಂಪೌಂಡ್‌, ಹೊಲ ಸಮತಟ್ಟು ಮಾಡುವುದು, ಬದು ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದರು.

ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಗುಳೆ ಹೊಗದಂತೆ ತಡೆಗಟ್ಟು ನರೇಗಾ ಸಹಕಾರಿಯಾಗಿದೆ. ಇದೊಂದು ಬೇಡಿಕೆಯಾಧರಿತ ವಿನೂತನ ಕಾರ್ಯಕ್ರಮವಾಗಿದ್ದು, ಕನಿಷ್ಠ ಒಂದು ಕುಟುಂಬಕ್ಕೆ 100 ಮಾನವ ದಿನ ಕೆಲಸ ನೀಡಲಾಗುತ್ತದೆ. ಪ್ರಸ್ತುತ ವರ್ಷದಲ್ಲಿ ಸಕಾಲಕ್ಕೆ ಮಳೆಯಾಗದೇ ತಾಲೂಕಿನಾದ್ಯಂತ ಸಂಪೂರ್ಣ ಭರದ ಛಾಯೆ ಆವರಿಸಿದೆ. ಆದ್ದರಿಂದ ನೂತನ ಪಿಡಿಒಗಳು ತಾವು ಕರ್ತವ್ಯ ನಿರ್ವಹಿಸುವ ಗ್ರಾಪಂಗಳಲ್ಲಿ ಶೀಘ್ರದಲ್ಲಿ ನರೇಗಾ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.

ತಾಲೂಕು ತಾಂತ್ರಿಕ ಸಹಾಯಕ ವಿಶ್ವನಾಥ, ವಿಷಯ ನಿರ್ವಾಹಕ ಶಿವಪುತ್ರಪ್ಪ, ಸ್ವಚ್ಛ ಭಾರತ ಸಂಯೋಜಕ ಭೀಮಪ್ಪ ಹವಳಿ, ಪಿಡಿಒಗಳಾದ ಮಹ್ಮದ್‌, ಅಬ್ದುಲ್‌, ವಿರೇಶ, ಫಯಾಜ, ನಾಗರಾಜ, ಕರಿಯಪ್ಪ, ಸೋಮಪ್ಪ, ಗೋಣೆಪ್ಪ, ಆನಂದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next