Advertisement

ನರೇಗಾ ಕುಂಠಿತ; ಇಒ, ಪಿಡಿಒ ವಿರುದ್ಧ ಶಿಸ್ತು ಕ್ರಮ

09:41 PM Oct 22, 2019 | Team Udayavani |

ಮೈಸೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಯಡಿ ಮಾನವದಿನಗಳ ಸೃಜನೆ ಮತ್ತು ನರೇಗಾ ಜೊತೆಗೆ ವಿವಿಧ ಇಲಾಖೆ ಕಾರ್ಯಕ್ರಮಗಳ ಒಗ್ಗೂಡಿಸುವಿಕೆ ನಿರೀಕ್ಷಿತ ಪ್ರಗತಿ ಕಾಣದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ, ಪ್ರಗತಿ ಕುಂಠಿತಕ್ಕೆ ಕಾರಣವಾದ ಗ್ರಾಪಂಗಳ ಆಡಳಿತ ಮಂಡಳಿ ಹಾಗೂ ಪಿಡಿಒಗಳ ವಿರುದ್ಧ ಜಿಪಂ ವ್ಯಾಪ್ತಿಯಲ್ಲಿ ಸಾಧ್ಯವಾದ ಕ್ರಮ ಕೈಗೊಳ್ಳುವುದಲ್ಲದೇ, ತಾಪಂ ಇಒಗಳ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.

Advertisement

ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನರೇಗಾ ಪ್ರಗತಿ ಉತ್ತಮವಾಗಿದೆ. ಆದರೆ, ಮೈಸೂರು ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಶೇ.36.15 ಮಾತ್ರ ಪ್ರಗತಿಯಾಗಿದೆ. ಗುರಿ ಮೀರಿ ಸಾಧನೆ ಮಾಡುವುದಿರಲಿ, ಜಿಲ್ಲೆಯಲ್ಲಿ ಗುರಿ ಸಾಧನೆಯೂ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ನೆಪ: ಇದಕ್ಕೆ ಉತ್ತರಿಸಿದ ತಾಪಂ ಇಒಗಳು, ಎರಡು ತಿಂಗಳಿಂದ ಮಳೆ ಇರುವುದರಿಂದ ಪ್ರಗತಿ ಕುಂಠಿತವಾಗಿದ್ದು, ಇನ್ನುಳಿದ ಅವಧಿಯಲ್ಲಿ ಗುರಿ ಸಾಧನೆ ಮಾಡುವುದಾಗಿ ಹೇಳಿದರು. ಇದನ್ನು ಒಪ್ಪದ ಸಿಇಒ, ಮಳೆಯಿಂದ ಕೆಲಸವಾಗಿಲ್ಲ ಎನ್ನುವುದನ್ನು ಒಪ್ಪಲಾಗುವುದಿಲ್ಲ. ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲೂ ಮಳೆಯಾಗಿದೆ. ಅಲ್ಲಿ ಪ್ರಗತಿಯಾಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಅವರು, ಅರ್ಧ ವರ್ಷ ಕಳೆದರೂ ಶೇ.50 ಗುರಿ ಸಾಧನೆ ಮಾಡದ ತಾಪಂ ಇಒಗಳ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಪ್ರಗತಿಯಾಗದ ಪಿಡಿಒಗಳ ವಿರುದ್ಧ ತಾಪಂ ಇಒಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಹೊಂದಾಣಿಕೆ ಕೊರತೆ: ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಪ್ರಗತಿ ಕುಂಠಿತಕ್ಕೆ ಅತಿವೃಷ್ಟಿ-ಅನಾವೃಷ್ಟಿ ಕಾರಣವಲ್ಲ. ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ನೈಜ ಕಾರಣ. ಎಚ್‌.ಡಿ.ಕೋಟೆ ತಾಲೂಕಿನ ಎನ್‌.ಬೇಗೂರು ಗ್ರಾಪಂ ಕಾಡಂಚಿನ ಗ್ರಾಮವಾಗಿದ್ದರೂ ನರೇಗಾದಲ್ಲಿ ಶೂನ್ಯ ಸಾಧನೆ ಮಾಡಿದೆ ಎಂದರು.

ಗ್ರಾಮ ಭೇಟಿ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್‌ ಮಾತನಾಡಿ, ತಾಪಂ ಇಒಗಳು ಗ್ರಾಪಂಗಳಿಗೆ ಭೇಟಿ ನೀಡದಿರುವುದೇ ಪ್ರಗತಿ ಕುಂಠಿತಕ್ಕೆ ಕಾರಣ, ಇಒಗಳು ತಾಲೂಕು ಕೇಂದ್ರದಲ್ಲಿ ಕುಳಿತರೆ ಕೆಲಸ ಆಗಲ್ಲ, ತಿಂಗಳಲ್ಲಿ ಒಂದು ದಿನ ಗ್ರಾಮಗಳಿಗೆ ಭೇಟಿ ನೀಡಬೇಕು ಎಂದು ಹೇಳಿದರು. ಅರಣ್ಯ ವಿಭಾಗದ ಅಧಿಕಾರಿ, ನರೇಗಾದಡಿ ವಾರ್ಷಿಕ 2 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನೀಡಲಾಗಿದೆ. ಆರು ತಿಂಗಳಲ್ಲಿ 28 ಸಾವಿರ ಮಾನವ ದಿನಗಳ ಸೃಜನೆಯಾಗಿದೆ. ಇನ್ನುಳಿದ ಅವಧಿಯಲ್ಲಿ ಈ ಗುರಿ ಸಾಧನೆ ಸಾಧ್ಯವಾಗಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

Advertisement

ಈ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿಇಒ, ಗುರಿ ಸಾಧನೆ ಏಕೆ ಸಾಧ್ಯವಾಗಲ್ಲ, ಗಿಡ ನೆಡಲು ನಿಮಗೇನು ಕಷ್ಟ, ಅಂತರ್ಜಲ ಉಳಿವಿಗಾಗಿ ಸಸಿ ನೆಡಬೇಕು ಎಂದು ಸುತ್ತೋಲೆಗಳ ಮೇಲೆ ಸುತ್ತೋಲೆ ಹೊರಡಿಸುತ್ತಿದ್ದರೂ ಕೆಲಸ ಆಗುತ್ತಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು. ಗುರಿ ನೀಡಿದ್ದು ಏಪ್ರಿಲ್‌ನಲ್ಲಿ ಮಳೆ ಬಂದಿದ್ದು ಆಗಸ್ಟ್‌ ಅಂತ್ಯದಲ್ಲಿ ಅಷ್ಟರಲ್ಲಿ ಚೆಕ್‌ ಡ್ಯಾಂ ಮಾಡಿಕೊಂಡು ಮಳೆ ನೀರು ಇಂಗಿಸಬೇಕಿತ್ತು ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಉಪಾಧ್ಯಕ್ಷೆ ಗೌರಮ್ಮ , ಜಿಪಂ ಮುಖ್ಯ ಯೋಜನಾಧಿಕಾರಿ ಪದ್ಮಶೇಖರಪಾಂಡೆ ಸಭೆಯಲ್ಲಿದ್ದರು.

ಗ್ರಾಪಂ ಪಿಡಿಒಗಳಿಗೆ 10 ದಿನ ಗಡುವು: ಜಿಪಂ ಸಿಇಒ ಕೆ.ಜ್ಯೋತಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೀವು ಆಸಕ್ತಿ ತೋರುತ್ತಿಲ್ಲ. ಕ್ರಿಯಾಯೋಜನೆ ಅನುಮೋದನೆಗೆ ಗ್ರಾಪಂ ಆಡಳಿತ ಸಹಕರಿಸದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಅನುಮೋದನೆ ಮಾಡಿಸಿಕೊಳ್ಳಬಹುದು. ಜಿಲ್ಲೆಯ 6-7 ಗ್ರಾಪಂಗಳಲ್ಲಿ ಪ್ರಗತಿ ಕುಂಠಿತವಾಗಿದ್ದು, ಹತ್ತು ದಿನಗಳಲ್ಲಿ ಸಾಧನೆ ತೋರಿಸದಿದ್ದರೆ ಅಂತಹ ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು. ನರೇಗಾದಡಿ ಸವಲತ್ತು ಒದಗಿಸಲು ಯಾವುದೇ ಮಿತಿ ಇಲ್ಲ. ಸರ್ಕಾರ ನೀಡಿದ ಗುರಿ ಮೀರಿ ಸಾಧನೆ ಮಾಡಲು ಅವಕಾಶವಿದೆ. ಆಗ ಜನರಿಗೆ ಯೋಜನೆಯ ಫ‌ಲ ದೊರೆಯಲಿದೆ. ಆದರೆ, ನರೇಗಾ ಒಗ್ಗೂಡಿಸುವಿಕೆ ಪ್ರಗತಿಯೂ ಆಗದೆ ವಿಫ‌ಲವಾಗಿರುವ ಬಗ್ಗೆ ಮೇಲಧಿಕಾರಿಗಳಿಗೆ ಬರೆಯಬೇಕಾಗುತ್ತದೆ ಎಂದರು.

ಮೂರು ತಿಂಗಳಲ್ಲಿ ನರೇಗಾ ಕಾಮಗಾರಿ ಪೂರ್ಣಗೊಳಿಸಿ: ಮುಂದಿನ ತಿಂಗಳೊಳಗೆ ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಒಗಳು ಗ್ರಾಮಸಭೆ ಕರೆದು ಅನುಮೋದನೆ ಪಡೆದು ಶಾಲೆಗಳ ಕಾಂಪೌಂಡ್‌, ಶೌಚಾಲಯ, ಆಟದ ಮೈದಾನ ಸಮತಟ್ಟುಗೊಳಿಸುವ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗಬೇಕು. ಮೂರು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಂಡು ಮುಂದಿನ ಕೆಡಿಪಿ ಸಭೆಗೆ ಸಮಗ್ರ ಮಾಹಿತಿ ನೀಡಬೇಕು. ನರೇಗಾ ಒಗ್ಗೂಡಿಸುವಿಕೆಯಲ್ಲಿ ಒಂದು ತಿಂಗಳಲ್ಲಿ ಶೇ.50 ಗುರಿ ಸಾಧನೆ ಮಾಡಬೇಕು ಎಂದು ಜಿಪಂ ಸಿಇಒ ಕೆ.ಜ್ಯೋತಿ ಸೂಚಿಸಿದರು.

ಇಲಾಖೆಯಲ್ಲಿ ಖರೀದಿಸಿದ ಸಸಿ ಬಸ್‌ಸ್ಟಾಂಡ್‌ ಹತ್ರ ಮಾರ್ತಾರೆ: ತೋಟಗಾರಿಕೆ ಇಲಾಖೆಯವರು ಪ್ರಭಾವಿಗಳಿಗೆ ಕೇಳಿದಷ್ಟು ಸಸಿಗಳನ್ನು ನೀಡಿ ಜವಾಬ್ದಾರಿ ಕಳೆದುಕೊಳ್ಳುತ್ತಿದ್ದೀರಿ, ಒಂದು ತೆಂಗಿನ ಸಸಿಯನ್ನೂ ಜಿಪಂ ಸದಸ್ಯರ ಗಮನಕ್ಕೆ ಬಾರದಂತೆ ಮಾರುತ್ತಿದ್ದೀರಾ, ನಿಮ್ಮ ಹತ್ತಿರ 50 ರೂಪಾಯಿಗೆ ಒಂದು ತೆಂಗಿನ ಸಸಿಯಂತೆ ಕೊಂಡು ಹೋಗಿ ಬಸ್‌ಸ್ಟಾಂಡ್‌ಬಳಿ 150-200 ರೂಪಾಯಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್‌ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಇನ್ನೂ 95 ಸಾವಿರ ತೆಂಗಿನ ಸಸಿಗಳಿದ್ದು, ಜಿಪಂ ಸದಸ್ಯರ ಗಮನಕೆ ತಂದೇ ವಿತರಣೆಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next