Advertisement

“ನರೇಗಾ’ಕ್ಕೆ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ

11:58 AM May 28, 2020 | sudhir |

ಕುಂದಾಪುರ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ ನರೇಗಾ ಯೋಜನೆ ಮೂಲಕ ಉದ್ಯೋಗ ಒದಗಿಸಿ ವೇತನ ಖಾತ್ರಿ ನೀಡುವ ಸರಕಾರದ ಕ್ರಮಕ್ಕೆ ಕರಾವಳಿಯಲ್ಲಿ ನಿರೀಕ್ಷಿತ ಪ್ರತಿಸ್ಪಂದನೆ ವ್ಯಕ್ತವಾಗಿಲ್ಲ.

Advertisement

ಮಹಾನಗರಗಳಿಂದ ಹಳ್ಳಿ ಸೇರಿರುವ ಮಂದಿಗೆ ಆದಾಯ ಮೂಲ ಇಲ್ಲದಂತಾಗ ಬಾರದು ಎಂದು ಕೇಂದ್ರ ಸರಕಾರ ನರೇಗಾ ಕೂಲಿ ಹಣವನ್ನೂ ಹೆಚ್ಚಿಸಿದ್ದು, 249 ರೂ. ಇದ್ದದ್ದು ಈಗ 285 ರೂ.ಗೆ ಏರಿದೆ. ಒಂದು ಕುಟುಂಬ 100 ದಿನಗಳ ಕೆಲಸ ಮಾಡಬಹುದಾಗಿದೆ.

ಅನಿವಾರ್ಯ
ಹೊರಗೆ ಕೂಲಿಗೆ ಹೋದರೆ 500 ರೂ.ಗೂ ಹೆಚ್ಚು ವೇತನ ದೊರೆಯುವುದರಿಂದ ನರೇಗಾದ ವೇತನ ಕಡಿಮೆ. ಹೀಗಾಗಿ ಕಾರ್ಮಿಕರು ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನಲಾ ಗುತ್ತಿದೆ. ಆದರೆ ಈಗ ಕಷ್ಟಕಾಲದಲ್ಲಿ ಹೊರಗೆಲ್ಲೂ ಉದ್ಯೋಗ ಇಲ್ಲದ ಕಾರಣ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಗ್ರಾ.ಪಂ.ಗಳು, ತಾ.ಪಂ.ಗಳು ಯೋಜನೆ ಅನುಷ್ಠಾನಕ್ಕೆ ಮುಂದಾಗಿವೆ. ಆದರೆ ಸ್ಪಂದನೆ ನಿರಾಶದಾಯಕವಾಗಿದೆ. ಬೇಸಗೆಯ ಈ ದಿನಗಳಲ್ಲಿ ಬಾವಿಗಳನ್ನು ತೋಡುವುದಕ್ಕಾದರೂ ಅನುದಾನ ಬಳಕೆಯಾದರೆ ಕೂಲಿಯೂ ದೊರೆತಂತೆ, ನೀರೂ ಸಿಕ್ಕಿದಂತಾಗುತ್ತದೆ.

ಉಡುಪಿ ಜಿಲ್ಲೆಯಲ್ಲಿ ಮಲ್ಲಿಗೆ ಕೃಷಿ ನರೇಗಾದಲ್ಲಿ ಸೇರ್ಪಡೆಯಾದ ಕಾರಣ 5-25-50 ಸೆಂಟ್ಸ್‌ಗಳಷ್ಟು ಕನಿಷ್ಠ ಸ್ಥಳದಿಂದ ತೊಡಗಿ ಒಂದು ಎಕ್ರೆಯಲ್ಲಿ ಮಲ್ಲಿಗೆ ಬೆಳೆಯಲು ಈ ಯೋಜನೆ ಬಳಸಬಹುದು. ಜಲಮೂಲಗಳ ಸಂರಕ್ಷಣೆ ಕಾಮಗಾರಿಗೂ ಆದ್ಯತೆ ನೀಡಲಾಗಿದೆ. ಸರಕಾರಿ ಕಟ್ಟಡಗಳಿಗೆ ಮಳೆಕೊಯ್ಲು, ಕೊಳವೆಬಾವಿ ಜಲಮರುಪೂರಣ, ಇಂಗು ಗುಂಡಿ, ಕೆರೆ ಹೂಳೆತ್ತುವಿಕೆ, ಕಿಂಡಿ ಅಣೆಕಟ್ಟು ಹೂಳೆತ್ತುವಿಕೆ ಇತ್ಯಾದಿ ಕೈಗೊಳ್ಳಲು ಪಂಚಾಯತ್‌ಗಳಿಗೆ ಸೂಚಿಸಲಾಗಿದೆ.

ಬೇಡಿಕೆ ಪೂರೈಕೆ
ರಾಜ್ಯಾದ್ಯಂತ 5,20,803 ಕುಟುಂಬಗಳಿಗೆ 9,08,649 ಜನರಿಗೆ ಉದ್ಯೋಗ ನೀಡಲು ಬೇಡಿಕೆ ಮಂಡಿಸಲಾಗಿತ್ತು. ಈ ಪೈಕಿ 2,26,259 ಮನೆಗಳ 3,77,411 ಜನರಿಗೆ 33,07,525 ದಿನಗಳ ಕೆಲಸ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀಹೆಚ್ಚು ಜನರಿಗೆ ಕೆಲಸ ದೊರಕಿರುವುದಾಗಿ ದಾಖಲಾಗಿದೆ. ಅನಂತರದ ಸ್ಥಾನ ಬಳ್ಳಾರಿ ಮತ್ತು ಶಿವಮೊಗ್ಗಕ್ಕಿದೆ. ಕನಿಷ್ಠ ಕುಟುಂಬಗಳಿಗೆ ಕೆಲಸ ನೀಡಿದ ಜಿಲ್ಲೆಗಳೆಂದರೆ ಬೆಂಗಳೂರು (172), ಕೊಡಗು (815), ಉಡುಪಿ (2,056), ದಕ್ಷಿಣ ಕನ್ನಡ (2,575), ಉತ್ತರ ಕನ್ನಡ (3,698).

Advertisement

ಲಾಕ್‌ಡೌನ್‌ ಮಧ್ಯೆಯೂ ನರೇಗಾ ಅನುಷ್ಠಾನಕ್ಕೆ ಎಲ್ಲ ಪಂಚಾಯತ್‌ಗಳಲ್ಲಿ ಕ್ರಮ  ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 69,399 ನೋಂದಾಯಿತ ಕುಟುಂಬಗಳಿದ್ದು, 25,185 ಕುಟುಂಬಗಳು ಸಕ್ರಿಯವಾಗಿವೆ. 2020-21ಕ್ಕೆ 5.12 ಲಕ್ಷ ಮಾನವ ದಿನಗಳ ಕೆಲಸದ ಗುರಿ ಹೊಂದಿದ್ದು, ಎಪ್ರಿಲ್‌ನಲ್ಲಿ 30 ಸಾವಿರ ಗುರಿಗೆ 38,698 ದಿನಗಳ ಕೆಲಸ ನೀಡಿ 128 ಶೇ. ಪ್ರಗತಿ ಸಾಧಿಸಿದೆ.
– ಪ್ರೀತಿ ಗೆಹಲೋಟ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿ.ಪಂ.

ಎಪ್ರಿಲ್‌ನಿಂದ ದಿನಗೂಲಿ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನರೇಗಾದಡಿ ಕೂಲಿ ಮಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
– ಡಾ | ಸೆಲ್ವಮಣಿ ಆರ್‌. ಮುಖ್ಯ ಕಾರ್ಯನಿರ್ವಹಣಾಧಿಕಾರಿ,  ದ.ಕ. ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next