Advertisement

ನರೇಗಾ ಬಾವಿಗೆ ಕಲಾತ್ಮಕ ಸ್ಪರ್ಶ ಆಕರ್ಷಕ ಕಂಚಿನ ಪಾತ್ರೆ ಹೋಲುವ ಮಾದರಿ

04:14 PM Mar 09, 2022 | Team Udayavani |

ಪುತ್ತೂರು: ಕೊಳ್ತಿಗೆ ಗ್ರಾಮದ ಸರಸ್ವತಿ ಮೂಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಬಾವಿಗೆ ಕಲಾತ್ಮಕ ಸ್ಪರ್ಶ ನೀಡಿದ ಆರ್ಟಿಸ್ಟ್‌ ಪ್ರಯತ್ನ ಗಮನ ಸೆಳೆದಿದೆ.

Advertisement

ಚಿತ್ರ ಕಲಾವಿದ, ಬೆಳ್ಳಾರೆಯ ಕಲಾಸುಮ ಆರ್ಟ್ಸ್ ಮಾಲಕ ಪದ್ಮನಾಭ ನಾಯ್ಕ ತನ್ನ ಮನೆ ಅಂಗಳದಲ್ಲಿ ಉದ್ಯೋಗ ಖಾತರಿಯಲ್ಲಿ ಬಾವಿ ನಿರ್ಮಿಸಿದ್ದರು. ಚಿತ್ರಕಲೆಗಾರನಾಗಿ ಹಲವು ಗೋಡೆಗಳಿಗೆ ಹೊಸ ರಂಗನ್ನು ತುಂಬಿದ್ದ ಅವರು ಅದೇ ಕಲೆಗಾರಿಕೆಯನ್ನು ಬಾವಿಗೆ ನೀಡಿ ಹೊಸತನ ಮೂಡಿಸಿದ್ದಾರೆ.

ಬಾವಿ ನಿರ್ಮಾಣದ ಕನಸು
ಪದ್ಮನಾಭ ನಾಯ್ಕ ಅವರದ್ದು ಅವಿಭಕ್ತ ಕುಟುಂಬ. ಕುಡಿಯುವ ನೀರಿಗಾಗಿ ಮನೆ ಮುಂದೆ ಒಂದು ಬಾವಿ ನಿರ್ಮಿಸುವ ಇರಾದೆಯನ್ನು ಪದ್ಮನಾಭ ನಾಯ್ಕ ಅವರ ತಂದೆ ವ್ಯಕ್ತಪಡಿಸಿದ್ದರು. ಹಾಗಾಗಿ ಪದ್ಮನಾಭ ನರೇಗಾ ಯೋಜನೆಯಡಿ ಕೊಳ್ತಿಗೆ ಗ್ರಾ.ಪಂ.ಗೆ ಅರ್ಜಿ ನೀಡಿದರು.

ಕೋವಿಡ್‌ ಕಾರಣದಿಂದ ನಿರ್ಮಾಣ ಕಾರ್ಯ ತುಸು ತಡವಾಯಿತು. ಅದಾಗ್ಯೂ 8 ಮಂದಿ ಸಹೋದರರು ಈ ಬಾವಿ ರಚನೆಗೆ ಮುಂದಾದರು. ಸುಮಾರು ಒಂದು ತಿಂಗಳು ಕೆಲಸ ಮಾಡಿ 35 ಅಡಿ ಆಳದ ಬಾವಿ ನಿರ್ಮಿಸಿದರು. 34 ರಿಂಗ್‌ಗಳನ್ನು ಅಳವಡಿಸಲಾಯಿತು. ಇದಕ್ಕಾಗಿ ನರೇಗಾದಲ್ಲಿ ಕೂಲಿ ಮತ್ತು ಸಾಮಗ್ರಿ ಮೊತ್ತ ಸೇರಿ 67 ಸಾವಿರ ರೂ.ಸಹಾಯಧನ ಅವರಿಗೆ ಸಿಗಲಿದೆ. ಇದರಲ್ಲಿ ಕೂಲಿ ವೆಚ್ಚ ಪಾವತಿಯಾಗಿದ್ದರೆ, ಸಾಮಗ್ರಿ ವೆಚ್ಚ ಪಾವತಿ ಹಂತದಲ್ಲಿದೆ.

ಅನುಷ್ಠಾನದಿಂದ ಲಾಭ
ಬಾವಿಯ ಹೊಸ ರೂಪಕ್ಕೆ ಪ್ರಾಶಸ್ತ್ಯವನ್ನು ನೀಡಲಾಗಿದೆ. ಕಲಾಗಾರನಾಗಿದ್ದರಿಂದ ಮನೆ ಮುಂಭಾಗದಲ್ಲಿ ಇದ್ದರೆ ಚಂದ ಎಂಬ ಕಾರಣಕ್ಕೆ ಈ ಪ್ರಯತ್ನ ಮಾಡಿದ್ದೇನೆ. ಕೃಷಿಕರು ತಮ್ಮ ಜಮೀನಿನಲ್ಲಿ ಬೇರೆ-ಬೇರೆ ರೀತಿಯ ತೋಟಗಾರಿಕೆ, ಜಲ ಸಂರಕ್ಷಣೆ ಕಾರ್ಯಗಳನ್ನು ಮಾಡುತ್ತಾರೆ. ಇಂತಹ ಸಂದರ್ಭ ಸರಕಾರದಿಂದ ದೊರೆಯುವ ನರೇಗಾದಂತಹ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಪದ್ಮನಾಭ ನಾಯ್ಕ.

Advertisement

ಗಮನ ಸೆಳೆವ ಮೇಲ್ನೋಟ
ಬಾವಿಯ ಮೇಲ್ಭಾಗವನ್ನು ರಿಂಗ್‌ನಿಂದ ಆವರಿಸಿ ಬಳಿಕ ಕಂಚಿನ ಪಾತ್ರೆಯ ರೀತಿಯಲ್ಲಿ ಹೊಸ ರೂಪವನ್ನು ನೀಡಲಾಗಿದೆ. ಸುತ್ತಲು ಸುಂದರವಾದ ಬಣ್ಣ ಬಳಿಯಲಾಗಿದೆ. ಮೇಲ್ನೋಟಕ್ಕೆ ದೊಡ್ಡ ಕಂಚಿನ ಪಾತ್ರೆಯನ್ನೇ ಇರಿಸಿದಂತೆ ಕಂಡು ಬರುತ್ತಿದೆ.

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next