Advertisement

ಗ್ರಾಮಗಳ ಸ್ವರೂಪ ಬದಲಿಸಿದ ನರೇಗಾ : ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ

04:52 PM Sep 10, 2020 | sudhir |

ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆ ತಾಲೂಕಿನ ಗ್ರಾಮೀಣ ಜನರಿಗೆ ವರದಾನವಾಗಿದೆ. ದಿನೇ ದಿನೆ ಗ್ರಾಮಗಳ ಸ್ವರೂಪವೇ ಬದಲಾಗುತ್ತಿದೆ. ನರೇಗಾ ಪರಿಣಾಮಕಾರಿ ಅನುಷ್ಠಾನಗೊಳಿಸಿ ಶಿಕ್ಷಣ, ಆರೋಗ್ಯ, ಕ್ರೀಡೆ, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ನೀರಾವರಿ ಮತ್ತು ಪರಿಸರ ಸಂರಕ್ಷಣೆ ಮಾಡುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಜನಸಾಮಾನ್ಯರಿಗೆ ಅನೇಕ ಸೌಲಭ್ಯಗಳು ಈ ಮೂಲಕ ಲಭಿಸುತ್ತಿವೆ.

Advertisement

ತಾಲೂಕಿನಲ್ಲಿ ಅಂತರ್ಜಲಮಟ್ಟ ವೃದ್ಧಿಗೊಳಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಮಳೆ ನೀರು ಸಂರಕ್ಷಣೆ ಮಾಡಲು ಬಹುಕಮಾನ್‌ ಚೆಕ್‌ ಡ್ಯಾಂ, ಪೂರ್ವಜರು ನಿರ್ಮಿಸಿರುವ ಕೆರೆ, ಗೋಕುಂಟೆ, ಕಲ್ಯಾಣಿಗಳನ್ನು ಅಭಿವೃದ್ಧಿಗೊಳಿಸಿ ಕೊಳವೆಬಾವಿಗಳಿಗೆ ಜಲಮರು ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವಿಧಾನಸಭೆ ಮಾದರಿಯಲ್ಲಿ ಗ್ರಾಪಂ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಿ, ಗ್ರಾಮೀಣ ಜನರಿಗೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗಿದೆ. ತಾಲೂಕಿನ 28 ಗ್ರಾಪಂಗಳ ಪೈಕಿ ಈಗಾಗಲೇ 12ಕ್ಕೆ ರಾಜೀವ್‌ಗಾಂಧಿ ಸೇವಾ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗಿದೆ.

ತಾಲೂಕಿನಲ್ಲಿ ಸುರಿಯುವ ಮಳೆ ನೀರು ವ್ಯರ್ಥವಾಗಿ ಹರಿಯಬಾರದೆಂಬ ಉದ್ದೇಶದಿಂದ ಬಹು ಕಮಾನ್‌ ಚೆಕ್‌ಡ್ಯಾಂ ನಿರ್ಮಿಸಲಾಗಿದ್ದು, ಅಲ್ಲಿಯೂ ನೀರು ಶೇಖರಣೆಯಾಗಿ ಮಿನಿ ದ್ವೀಪಗಳಾಗಿ ಪರಿವರ್ತನೆಗೊಂಡಿವೆ. ಮಳೆ ನೀರು ಕೆರೆಗಳಿಗೆ ಹರಿಯಲು ಅದಕ್ಕೆ ಪೂರಕ ಕಾಲುವೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಪ್ರಾಣಿ ಪಕ್ಷಿಗಳು, ದನಕರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಿಮೆಂಟ್‌ ತೊಟ್ಟಿಗಳು, ಗೋಕುಂಟೆ ನಿರ್ಮಿಸಲಾಗಿದೆ. ಇದರಿಂದ ಜಾನುವಾರುಗಳು ನೀರಿನ ದಾಹವನ್ನು ನೀಗಿಸಿಕೊಳ್ಳುತ್ತಿವೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿ: ನಗರ ಪ್ರದೇಶದ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪರಿಸರದಲ್ಲಿ ಮಕ್ಕಳಿಗೆ ಶಿಕ್ಷಣ ಲಭಿಸಬೇಕೆಂದು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ ಗೊಳಿಸುವ ಜೊತೆಗೆ ವಿದ್ಯಾರ್ಥಿಗಳ ಭದ್ರತೆಗಾಗಿ ಕಾಂಪೌಂಡ್‌ ನಿರ್ಮಿಸಲಾಗಿದೆ.

ಹಾಗೆಯೇ ಪುಟಾಣಿಗಳಿಗೆ ಗೋಡೆಗಳು ಸಹ ಮಾತನಾಡಿಸುವಂತೆ ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಮಾಡಲಾಗಿದೆ.
ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿ ಉಂಟು ಮಾಡುವ ವಾತಾವರಣವನ್ನು ಸೃಷ್ಟಿಸಲಾಗಿದೆ. ಜಿಲ್ಲೆಯ ರೈತರಿಗೆ ನರೇಗಾ ಯೋಜನೆಯಡಿ ಹೆಚ್ಚಿನ ಅನುಕೂಲ ಕಲ್ಲಿಸಲು ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರ ಹೊಲದಲ್ಲಿ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಿಸಲು ಆದ್ಯತೆ ನೀಡಲಾಗಿದೆ.

Advertisement

ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸದ ಜೊತೆಗೆ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಸಿದ್ಧಪಡಿಸಿ ಜಿಪಂ ಸಿಇಒ ಸಲಹೆ-ಸೂಚನೆ ಮೇಲೆ ಅನುಷ್ಠಾನಗೊಳಿಸುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಗ್ರಾಮಸ್ಥರು ಮತ್ತು ಚುನಾಯಿತ ಪ್ರತಿನಿಧಿಗಳು ಸಹಕರಿಸುತ್ತಿದ್ದಾರೆ.

ಬಿ.ಶಿವಕುಮಾರ್‌, ಇಒ, ಶಿಡ್ಲಘಟ್ಟ ತಾಪಂ

– ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next