Advertisement

ನರೇಗಾ ಪಗಾರ ಏಕಕಾಲಕ್ಕೆ ಸ್ವೀಕಾರ

02:42 PM May 10, 2022 | Team Udayavani |

ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸುವಾಗ ಅನುಸರಿಸುತ್ತಿದ್ದ ಜಾತಿ ಆಧಾರಿತ ವರ್ಗ ತಾರತಮ್ಯ ನೀತಿಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಈಗ ಒಂದೇ ಖಾತೆಯಿಂದ ಏಕಕಾಲಕ್ಕೆ ಎಲ್ಲ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ಮುಂದಾಗಿದೆ.

Advertisement

ನರೇಗಾ ಯೋಜನೆ ಆರಂಭವಾದಾಗಿನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಒಂದೇ ಖಾತೆಯಿಂದ ಕೂಲಿ ಹಣ ಹಾಕಲಾಗುತ್ತಿತ್ತು. ಯಾವುದೇ ವರ್ಗ-ಭೇದ ಇಲ್ಲದೇ ಕೆಲಸ ಮಾಡಿದ ಎಲ್ಲ ಕಾರ್ಮಿಕರ ಖಾತೆಗೂ ಏಕಕಾಲಕ್ಕೆ ಹಣ ಜಮೆಯಾಗುತ್ತಿತ್ತು. ಆದರೆ, ಕಳೆದ ವರ್ಷ (2021-22ನೇ ಸಾಲಿನಲ್ಲಿ ) ಕೇಂದ್ರ ಸರ್ಕಾರ ವರ್ಗವಾರು ಆದ್ಯತೆ ಮೇರೆಗೆ ಕೂಲಿ ಹಣ ನೀಡುವ ಉದ್ದೇಶದಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಕೂಲಿ ಕಾರ್ಮಿಕರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಂಬ ಮೂರು ವರ್ಗಗಳನ್ನು ಮಾಡಿತ್ತು. ಈ ವರ್ಗಗಳಿಗೆ ಪ್ರತ್ಯೇಕ ಮೂರು ಖಾತೆ ತೆರೆದು ಅನುದಾನ ಹಾಕುವ ಮೂಲಕ ಕೂಲಿ ವೇತನ ನೀಡುವ ವ್ಯವಸ್ಥೆ ಜಾರಿಗೆ ತಂದಿತ್ತು.

ಹೀಗಾಗಿ ಒಂದೇ ಗುಂಪಿನಲ್ಲಿದ್ದು ಒಂದೇ ಕಾಮಗಾರಿ ನಿರ್ವಹಿಸಿದರೂ ಅವರಲ್ಲಿ ಒಂದು ವರ್ಗದವರಿಗೆ ಬೇಗ ಕೂಲಿ ಹಣ ದೊರೆತರೆ ಇನ್ನೊಂದು ವರ್ಗದವರಿಗೆ ತಡವಾಗಿ ಕೂಲಿ ಹಣ ದೊರಕುತ್ತಿತ್ತು. ಇದು ಕಾರ್ಮಿಕ- ಕಾರ್ಮಿಕರ ನಡುವೆ ಅಸಮಾಧಾನಕ್ಕೂ ಕಾರಣವಾಗಿತ್ತು. ಕೆಲವೊಮ್ಮೆ ಒಂದು ವರ್ಗಕ್ಕೆ ವೇತನ ನೀಡಿ 15-20 ದಿನಗಳಾದರೂ ಇನ್ನೊಂದು ವರ್ಗದ ಕೂಲಿಕಾರ್ಮಿಕರಿಗೆ ವೇತನ ಜಮೆ ಆಗುತ್ತಿರಲಿಲ್ಲ. ಸರ್ಕಾರದ ಈ ಕ್ರಮಕ್ಕೆ ಭಾರಿ ವಿರೋಧವೂ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಕೂಲಿ ಹಣ ನೀಡಲು ವರ್ಗವಾರು ತೆರೆದಿದ್ದ ಮೂರು ಪ್ರತ್ಯೇಕ ಖಾತೆಗಳನ್ನು ನಿಷ್ಕ್ರಿಯಗೊಳಿಸಿ, ಒಂದೇ ಖಾತೆಯಿಂದ ಎಲ್ಲ ಕೂಲಿಕಾರ್ಮಿಕರಿಗೂ ಕೂಲಿ ಹಣ ಜಮೆ ಮಾಡಲು ಸೂಚಿಸಿದೆ. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಅಕುಶಲ ಕೂಲಿ ಕಾರ್ಮಿಕರ ಕೂಲಿ ದರವನ್ನು 309ರೂ.ಗಳಿಗೆ ಹೆಚ್ಚಿಸಿದ ಬೆನ್ನಲ್ಲೇ ವೇತನ ಪಾವತಿಯಲ್ಲಾಗುತ್ತಿದ್ದ ವರ್ಗ ತಾರತಮ್ಯ ಸರಿಪಡಿಸಲು ಮುಂದಾಗಿರುವುದು ಕೂಲಿಕಾರ್ಮಿಕರಲ್ಲಿ ಮಂದಹಾಸ ಮೂಡಿಸಿದೆ.

ನಾವು ಎಲ್ಲರೂ ಒಂದೇ ಗುಂಪಿನಲ್ಲಿದ್ದು ಒಂದೇ ಕಾಮಗಾರಿ ಮಾಡಿದರೂ ವೇತನ ಹಾಕುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಂಬ ವರ್ಗ ಮಾಡಲಾಗುತ್ತಿತ್ತು. ಇದರಿಂದ ಕಾರ್ಮಿಕರ ಒಂದೇ ಗುಂಪಿನಲ್ಲಿ ಒಬ್ಬರಿಗೆ ಕೂಲಿ ಹಣ ಬಂದರೆ ಇನ್ನೊಬ್ಬರಿಗೆ ಬರುತ್ತಿರಲಿಲ್ಲ. ಈಗ ಎಲ್ಲರಿಗೂ ಒಂದೇ ಖಾತೆಯಿಂದ ಕೂಲಿ ಹಣ ನೀಡುವಂತೆ ಮಾಡಿರುವುದು ಸ್ವಾಗತಾರ್ಹ. –ಸಿದ್ದೇಶ್‌, ಹುಲಿಕಟ್ಟೆ

Advertisement

ಕಳೆದ ವರ್ಷ ವರ್ಗವಾರು ಪ್ರತ್ಯೇಕವಾಗಿ ಕಾರ್ಮಿಕರಿಗೆ ಕೂಲಿ ಹಣ ನೀಡುವ ವ್ಯವಸ್ಥೆ ತರಲಾಗಿತ್ತು. ಈಗ ಸರ್ಕಾರ ಈ ವ್ಯವಸ್ಥೆ ಯನ್ನು ತೆಗೆದು ಒಂದೇ ಖಾತೆಯಿಂದ ಕೂಲಿ ಹಣ ಜಮೆ ಮಾಡಲು ಕ್ರಮವಹಿಸಿದೆ. ಡಾ|ಎ.ಚನ್ನಪ್ಪ, ಸಿಇಒ, ಜಿಪಂ-ದಾವಣಗೆರೆ

ಎಚ್‌.ಕೆ. ನಟರಾಜ

 

Advertisement

Udayavani is now on Telegram. Click here to join our channel and stay updated with the latest news.

Next