Advertisement

ನರೇಗಾದಡಿ ಶಾಲೆ, ಅಂಗನವಾಡಿ ಮೂಲಸೌಕರ್ಯಕ್ಕೆ ಒತ್ತು

11:13 AM Apr 05, 2022 | Team Udayavani |

ಉಡುಪಿ: ನರೇಗಾ ಯೋಜನೆಯಡಿ ಹೆಚ್ಚೆಚ್ಚು ಮಾನವ ದಿನ ಸೃಜನೆಗೆ ಅನುಕೂಲ ಆಗುವಂತೆ ಸಾರ್ವಜನಿಕ ಕಾಮಗಾರಿಗೆ ವಿಶೇಷ ಆದ್ಯತೆ ನೀಡಲು ಜಿ.ಪಂ. ಯೋಜನೆ ರೂಪಿಸುತ್ತಿದೆ.

Advertisement

ಸದ್ಯ ನರೇಗಾದಡಿ ವೈಯಕ್ತಿಕ ಜಮೀನಿನಲ್ಲಿ ದನದ ಕೊಟ್ಟಿಗೆ, ಕೋಳಿ ಶೆಡ್‌, ಶೌಚಗುಂಡಿ, ಶೌಚಾಲಯ, ತೆರೆದ ಬಾವಿ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ಇದರ ಜತೆಗೆ ಸರಕಾರಿ ಶಾಲೆ, ಅಂಗನವಾಡಿಗಳ ಕಾಂಪೌಂಡ್‌, ಶೌಚಾಲಯ, ಶೌಚಗುಂಡಿ, ಆಟದ ಮೈದಾನ ನಿರ್ಮಾಣಕ್ಕೆ ಒತ್ತು ಸಿಗಲಿದೆ.

ಸರಕಾರದ ಜಲಶಕ್ತಿ ಹಾಗೂ ದುಡಿಯೋಣ ಬಾ ಅಭಿಯಾನ, ಉಡುಪಿ ಮಿಷನ್‌ 25 ಯೋಜನೆಯಡಿಯಲ್ಲಿ ನರೇಗಾದ ಮೂಲಕ ಜಾಬ್‌ಕಾರ್ಡ್‌ ಇದ್ದವರಿಗೆ ಉದ್ಯೋಗ ನೀಡಿ ಮಾನವ ದಿನ ಸೃಜನೆಯಲ್ಲಿ ವಿಶೇಷ ಸಾಧನೆ ಮಾಡಲಾಗಿದೆ. ಪ್ರತೀ ವರ್ಷ ಜಿಲ್ಲೆಯಲ್ಲಿ ಮಳೆಗಾಲ ಮತ್ತು ಅಕ್ಟೋಬರ್‌- ನವೆಂಬರ್‌ನಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಕಡಿಮೆ ನಡೆಯುತ್ತದೆ. ಇದರಿಂದ ಈ ಅವಧಿಯಲ್ಲಿ ಮಾನವದಿನದ ಸೃಜನೆಯೂ ಕಡಿಮೆ ಇರುತ್ತದೆ. ಬಹತೇಕರು ಸ್ವಂತ ಜಮೀನನಲ್ಲಿ ನೀರಿನ ಲಭ್ಯತೆ ಆಧಾರದಲ್ಲಿ ತೆರೆದ ಬಾವಿ, ಕೃಷಿ ಚಟುವಟಿಕೆಗೆ ಪೂರಕವಾದ ಕಾಮಗಾರಿಯನ್ನು ಫೆಬ್ರವರಿಯಿಂದ ಮೇ ತಿಂಗಳ ಅವಧಿಯಲ್ಲಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಡಿಸೆಂಬರ್‌ ನಿಂದ ಮೇ ಅಂತ್ಯದವರೆಗೂ ವೈಯಕ್ತಿಕ ಕಾಮಗಾರಿಯಲ್ಲಿ ಮಾನವ ದಿನದ ಸೃಜನೆ ಹೆಚ್ಚಿರುತ್ತದೆ.

ಅಸಮಾಧಾನ

ಗ್ರಾ.ಪಂ. ವ್ಯಾಪ್ತಿಯ ಶಾಲೆ, ಅಂಗನವಾಡಿ ಕೇಂದ್ರದ ಶೌಚಾಲಯ, ಶೌಚಗುಂಡಿ, ಕಾಂಪೌಂಡ್‌, ಮೈದಾನ ನಿರ್ಮಾಣ ಇತ್ಯಾದಿಗಳನ್ನು ನರೇಗಾ ಮತ್ತು ಶಿಕ್ಷಣ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಂಟಿ ಅನುದಾನದಲ್ಲಿ ಮಾಡ ಬೇಕು. ಕೇವಲ ನರೇಗಾದಲ್ಲಿ ಸಾರ್ವಜನಿಕ ವಲಯದ ಕಾಮಗಾರಿ ಮಾಡಿದರೆ ಕಾರ್ಮಿಕರಿಗೆ ಕೂಲಿ ನೀಡುವಾಗ ವಿಳಂಬವಾಗುತ್ತದೆ. ಹೀಗಾಗಿ ಕಾಮಗಾರಿ ನಡೆಸಲು ಕಾರ್ಮಿಕರು ಹಾಗೂ ಗುತ್ತಿಗೆದಾರರು ಮುಂದೆ ಬರುವು ದಿಲ್ಲ ಎಂಬ ಗ್ರಾ.ಪಂ. ಸದ ಸ್ಯರ ಆರೋಪವೂ ಇದೆ.

Advertisement

ನರೇಗಾದಡಿ ಉದ್ಯೋಗ ಹೇಗೆ?

ನಿರುದ್ಯೋಗಿಗಳು ತಮ್ಮ ಗ್ರಾ.ಪಂ. ಮೂಲಕ ಜಾಬ್‌ ಕಾರ್ಡ್‌( ಉದ್ಯೋಗ ಚೀಟಿ) ಮಾಡಿಸಿಕೊಂಡು( ವೈಯಕ್ತಿಕ ಅಥವಾ ಕುಟುಂಬ ಕಾರ್ಡ್‌ ಎರಡೂ ಸಿಗಲಿದೆ) ನರೇಗಾದಡಿ ವೈಯಕ್ತಿಕ ಕಾಮಗಾರಿ ಅಥವಾ ಸಾರ್ವಜನಿಕ ಕಾಮಗಾರಿಯಲ್ಲೂ ತೊಡಗಿಸಿಕೊಂಡು ನಿತ್ಯದ ವೇತನ ನೇರವಾಗಿ ಪಡೆಯಬಹುದಾಗಿದೆ. ವೇತನವನ್ನು ಕಾಮಗಾರಿಗೆ ಅನುಸಾರವಾಗಿ ಆಯಾ ವ್ಯಕ್ತಿಯ ಬ್ಯಾಂಕ್‌ ಖಾತೆಗೆ ನೇರ ಜಮ ಮಾಡಲಾಗುತ್ತದೆ. ಇದಕ್ಕೆ ಬ್ಯಾಂಕ್‌ ಖಾತೆಯ ಜತೆಗೆ ಆಧಾರ್‌ ಸೀಡಿಂಗ್‌ ಮಾಡಿಸಿಕೊಳ್ಳಬೇಕಾಗುತ್ತದೆ. ಜಿಲ್ಲೆಯ 73 ಸಾವಿರ ಮಂದಿ ಜಾಬ್‌ಕಾರ್ಡ್‌ ಹೊಂದಿದ್ದಾರೆ. ತೋಟದಲ್ಲಿ ಮಲ್ಲಿಗೆ ಕೃಷಿ ಮಾಡಿಕೊಳ್ಳಲು ಇದರಲ್ಲಿ ಅವಕಾಶವಿದೆ. ಇದರ ಸಂಪೂರ್ಣ ಮಾಹಿತಿ ಆಯಾ ಗ್ರಾ.ಪಂಗಳಲ್ಲಿ ಲಭ್ಯವಿದೆ. ಸಾರ್ವಜನಿಕರು ಗ್ರಾ.ಪಂ. ಕಚೇರಿ ಸಂಪರ್ಕಿಸಬಹುದು.

ಜನಜಾಗೃತಿ ಕಾರ್ಯಕ್ರಮ

ಜಿಲ್ಲೆಯಲ್ಲಿ ನರೇಗಾದಡಿ ಮನವ ದಿನ ಸೃಜನೆ ಇನ್ನಷ್ಟು ಹೆಚ್ಚಿಸಲು ವೈಯಕ್ತಿಕ ಕಾಮಗಾರಿಗಳ ಜತೆಗೆ ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳಿಗೂ ಈ ವರ್ಷ ವಿಶೇಷ ಆದ್ಯತೆ ನೀಡಲಾಗುತ್ತದೆ. ನರೇಗಾದ ಬಗ್ಗೆ ಸದಾ ಜನಜಾಗೃತಿ ಕಾರ್ಯಕ್ರಮ ನಡೆಸುತ್ತಿರುತ್ತೆವೆ. -ಡಾ| ವೈ.ನವೀನ್‌ ಭಟ್‌, ಜಿ.ಪಂ., ಸಿಇಒ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next