Advertisement

ನಾರಾಯಣ ಗುರು, ಕೋಟಿ-ಚೆನ್ನಯರು ಆರಾಧ್ಯ ಪುರುಷರು

12:23 PM Feb 22, 2017 | Harsha Rao |

ಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ಬಿಲ್ಲವ ಸಮಾಜ ಮಾತ್ರವಲ್ಲದೆ ಸಮಸ್ತ ಶೋಷಿತ ವರ್ಗಗಳ ಜನರ ಆರಾಧ್ಯ ಪುರುಷರಾಗಿದ್ದಾರೆ ಎಂದು ಮಾಜಿ ಸಚಿವ / ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಚತುರ್ಥ ವರ್ಧಂತಿ ಉತ್ಸವದ ಪ್ರಯುಕ್ತ ಸೋಮವಾರ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಹಿಂದುಳಿದ ವರ್ಗಗಳ ಜನರ ಸಾಕ್ಷಾತ್ಕಾರಕ್ಕಾಗಿ ಜೀವನ ಪೂರ್ತಿ ಸೇವೆಗೈದು ಅಮರರಾಗಿದ್ದರೆ, ಕೋಟಿ – ಚೆನ್ನಯರು ಸಾಮಾಜಿಕ ಅಸಹಿಷ್ಣುತೆಯ ವಿರುದ್ಧ ಕಾದಾಡಿ ವೀರ ಮರಣವನ್ನಪ್ಪಿ ದೈವಾಂಶ ಸಂಭೂತರಾಗಿ ಗುರುತಿಸಲ್ಪಟ್ಟಿದ್ದಾರೆ ಎಂದರು.

ಸಮಾಜದ ಜನರ ಏಳಿಗೆ, ಶಿಕ್ಷಣ, ಅಶಕ್ತರ ಆರೈಕೆ ಮೊದಲಾದ ಸಮಾಜದ ಅಭ್ಯುದಯಕ್ಕಾಗಿ ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘವು ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಇದೇ ರೀತಿ ಕೆಲಸಗಳನ್ನು ಮುಂದು ವರಿಸಲು ಆವಶ್ಯಕವಾಗಿರುವ ಸಮುದಾಯ ಭವನದ ನಿರ್ಮಾಣಕ್ಕೆ ಸರಕಾರದ ವತಿಯಿಂದ ಅನುದಾನ ದೊರಕಿಸಿ ಕೊಡುವುದಾಗಿ ಅವರು ಆಶ್ವಾಸನೆ ನೀಡಿದರು.

ಯುಪಿಸಿಎಲ್‌ ಸಹಕಾರ
ಮುಖ್ಯ ಅತಿಥಿಯಾಗಿದ್ದ ಅದಾನಿ-ಯುಪಿಸಿ ಎಲ್‌ನ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಬಿಲ್ಲವರು ಶ್ರಮ ಜೀವಿಗಳಾಗಿದ್ದು, ಇತರೆಲ್ಲ ಸಮಾಜಗಳಿಗೆ ಮಾದರಿಯಾಗಿದೆ. ಯುಪಿಸಿಎಲ್‌ ಸ್ಥಾವರದ ಬುಡದಲ್ಲೇ ಇರುವ ಬಿಲ್ಲವ ಸಮಾಜ ಸೇವಾ ಸಂಘದ ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಂಘ ನಡೆಸುವ ಸಮಾಜಮುಖೀ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲು ಕಂಪೆನಿ ಬದ್ಧವಾಗಿದೆ ಎಂದರು.

Advertisement

ಉಡುಪಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ರಾಜ್‌ಶೇಖರ್‌ ಕೋಟ್ಯಾನ್‌, ಬಿಲ್ಲವರ ಅಸೋಸಿಯೇಶನ್‌ ಯುವ ಘಟಕದ ಅಧ್ಯಕ್ಷ ನಿಲೇಶ್‌ ಪೂಜಾರಿ ಪಲಿಮಾರು, ಬಹ್ರೈನ್‌ ಬಿಲ್ಲವರ ಸಂಘದ ಅಧ್ಯಕ್ಷ ರಾಜ್‌ ಕುಮಾರ್‌, ಉದ್ಯಮಿ ಸುರೇಶ್‌ ಪೂಜಾರಿ ಸೇನೆರಬೆನ್ನಿ, ಅರ್ಚಕ ದಿನೇಶ್‌ ಶಾಂತಿ ಮುಖ್ಯ ಅತಿಥಿಗಳಾಗಿದ್ದರು.

ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ ಕೇಂಜ ಅಧ್ಯಕ್ಷತೆ ವಹಿಸಿದ್ದರು.

ಹುಟ್ಟೂರ ಸಮ್ಮಾನ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಮತ್ತು ಗೌರವ ಡಾಕ್ಟರೇಟ್‌ ಪುರಸ್ಕೃತ ಡಾ| ರಾಜ್‌ಶೇಖರ್‌ ಕೋಟ್ಯಾನ್‌ ಅವರನ್ನು ಹುಟ್ಟೂರ ಸಮ್ಮಾನದೊಂದಿಗೆ ಗೌರವಿಸಿ, ಸಮ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮಾನಂದ ನಾಯಕ್‌ ಅವರ ಪರವಾಗಿ ಪತ್ನಿಯನ್ನು ಸಮ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ರೋಹನ್‌ ಕುಮಾರ್‌ ಕುತ್ಯಾರು ಸ್ವಾಗತಿಸಿ, ವರದಿ ವಾಚಿಸಿದರು. ಹರೀಶ್‌ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next