ಮಂಗಳಗಂಗೋತ್ರಿ: ಸಾಮಾಜಿಕ ಪಿಡುಗುಗಳು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹೋಗಲಾಡಿಸಲು ಶಿಕ್ಷಣವೇ ಶಕ್ತಿ ಎಂದು ನಾರಾಯಣಗುರುಗಳು ಸಾರಿದ ಫಲದಿಂದಾಗಿ ಇಂದು ಹಿಂದುಳಿದ ಸಮಾಜ ಸುಶಿಕ್ಷಿತವಾಗಲು ಸಾಧ್ಯವಾಗಿದೆ. ಒಂದೇ ಜಾತಿ ಒಂದೇ ಧರ್ಮ ಎಂದು ಹೇಳಿದವರು ಕೇವಲ ಒಂದು ಸಮುದಾಯದ ಗುರುಗಳಲ್ಲ. ಅವರ ಆದರ್ಶ ಇಡೀ ಸಮಾಜಕ್ಕೆ ಬೇಕಾಗಿದ್ದು, ಅವರು ಸಮಾಜದ ಗುರುಗಳು ಎಂದು ಮಂಗಳೂರು ವಿವಿಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ| ಸುರೇಂದ್ರ ರಾವ್ ಹೇಳಿದರು.
ಮಂಗಳೂರು ವಿವಿಯ ಬ್ರಹ್ಮ ಶ್ರೀ ನಾರಾಯಣಗುರು ಅಧ್ಯಯನ ಪೀಠದ ಆಶ್ರಯದಲ್ಲಿ ವಿವಿಯ ಆಡಳಿತ ಸೌಧದ ನೂತನ ಸೆನೆಟ್ ಹಾಲ್‌ನಲ್ಲಿ ಜರಗಿದ ನಾರಾಯಣಗುರು ಜಯಂತಿ-2017 “ಗುರುವಂದನ’ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಸಮಾಜ ಸುಧಾರಕರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ನಾರಾಯಣ ಗುರುಗಳು, ಬಸವಣ್ಣ, ಅಂಬೇಡ್ಕರ್ ಕೂಡ ಸಮಾಜ ಸುಧಾರಕರೇ ಆಗಿದ್ದು, ಅವರೆಲ್ಲರೂ ಸಮಾಜದ ಗುರುಗಳಾಗಿದ್ದಾರೆ. ನಮ್ಮ ಸಮಾಜದ ಸುಧಾರಣೆಯಲ್ಲಿ ಅಂಥವರ ಕೊಡುಗೆ ಮಹತ್ತರವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ. ಮಂಗಳೂರಿನ ಸಹ ಪ್ರಾಧ್ಯಾಪಕ ಎಂ.ಎಸ್. ಕೋಟ್ಯಾನ್, ನಿವೃತ್ತ ಪ್ರಾಧ್ಯಾಪಕಿ ಬಿ.ಎಂ. ರೋಹಿಣಿ ಉಪಸ್ಥಿತರಿದ್ದರು.
ಕುಲಸಚಿವ ಪ್ರೊ| ಕೆ.ಎಂ.ಲೋಕೇಶ್ ಸ್ವಾಗತಿಸಿ, ನಾರಾಯಣಗುರು ಪೀಠದ ಸಂಯೋಜಕ ಮುದ್ದು ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.