ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂ.ಬಿಡುಗಡೆ ಸಂಬಂಧ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವುದಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಬಿಲ್ಲವ ಅಸೋಸಿಯೇಶನ್ ಬೆಂಗಳೂರು ವತಿಯಿಂದ ರವಿವಾರ ಹುಳಿಮಾವು ಬಿಲ್ಲವ ಭವನದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಹಾಗೂ ವಿದ್ಯಾರ್ಥಿವೇತನ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾರಾಯಣ ಗುರುಗಳ ಹೆಸರಿನಲ್ಲಿ ಬಿಲ್ಲವ ಅಸೋಸಿಯೇಶನ್ ಶಾಲಾ ಪ್ರಾರಂಭಕ್ಕೆ ಮುಂದಾಗಿರುವುದು ಖುಷಿಪಡುವ ಸಂಗತಿ. ಶಾಲೆಗೆ ಬೇಕಾಗುವ 5 ಎಕ್ರೆ ಪ್ರದೇಶವನ್ನು ಮಂಜೂರು ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದರು.
ಪಕ್ಷ ಯಾವುದೇ ಇರಲಿ, ಸಮುದಾಯದ ವಿಚಾರ ಬಂದಾಗ ನಾವೆಲ್ಲರೂ ರಾಜಕೀಯ ಮರೆತು ಒಂದಾಗಬೇಕು. ಸಮಾಜವನ್ನು ಶಕ್ತಿಯುತವಾಗಿ ಮುನ್ನಡೆಸಲು ಬಲವಾದ ಪೀಠಾಧ್ಯಕ್ಷರು ಅಗತ್ಯವಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ವಿದ್ಯೆಗೆ ಹೆಚ್ಚಿನ ಆದ್ಯತೆ ನೀಡಿದವರು. ಬಿಲ್ಲವ ಅಸೋಸಿ ಯೇಶನ್ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಸಮುದಾಯದ ಹಲವು ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, ನಾರಾಯಣ ಗುರುಗಳ ತತ್ವದಡಿಯಲ್ಲಿ ಅಸೋಸಿಯೇಶನ್ ಸಾಗುತ್ತಿದೆ. ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳಿಗೆ ಸಂಘದ ವತಿ ಯಿಂದ ಆರ್ಥಿಕ ಸಹಾಯ ನೀಡಲಾಗಿದ್ದು, ಆ ಮಕ್ಕಳು ಉನ್ನತ ಶಿಕ್ಷಣ ಪೂರೈಸಿ ರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಚಾರ್ಟಡ್ ಅಕೌಂಟೆಂಟ್ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 4 ಜನ ವಿದ್ಯಾರ್ಥಿಗಳನ್ನು, 2022-23ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 20 ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಜತೆಗೆ 119 ಮಂದಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಕಾರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಹೈಕೋರ್ಟ್ ಹಿರಿಯ ವಕೀಲ ತಾರಾನಾಥ ಪೂಜಾರಿ, ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ, ಜಯಂತಿ ವಿಜಯಕೃಷ್ಣ ಮುಂತಾದವರಿದ್ದರು.